ADVERTISEMENT

ಹಾಸನ | ಮದುವೆಗೆ ಒಪ್ಪದ ಶಿಕ್ಷಕಿ ಅಪಹರಣ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 14:32 IST
Last Updated 30 ನವೆಂಬರ್ 2023, 14:32 IST
ಎಸ್ಪಿ ಮೊಹಮ್ಮದ್‌ ಸುಜೀತಾ ಅಪಹರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಎಸ್ಪಿ ಮೊಹಮ್ಮದ್‌ ಸುಜೀತಾ ಅಪಹರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಹಾಸನ: ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಗುರುವಾರ ಬೆಳಿಗ್ಗೆ ಖಾಸಗಿ ಶಾಲೆಯ ಶಿಕ್ಷಕಿ ಅರ್ಪಿತಾ ಎಂಬವರನ್ನು ಅಪಹರಿಸಿದ್ದ ಆಕೆಯ ಸಂಬಂಧಿ ರಾಮು ಹಾಗೂ ತಂಡವನ್ನು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಸೋಮವಾರಪೇಟೆ ಕಡೆಗೆ ತೆರಳುತ್ತಿದ್ದ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಅರ್ಪಿತಾ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ, ಒಬ್ಬ ರಸ್ತೆಯಲ್ಲಿ ನಿಂತಿದ್ದ. ಅರ್ಪಿತಾ ಬರುತ್ತಿದ್ದಂತೆಯೇ ಕಾರಿನ ಚಾಲಕನಿಗೆ ಬರುವಂತೆ ಸೂಚನೆ ನೀಡಿದ್ದ. ನಂತರ ಹಿಂದಿನಿಂದ ಮತ್ತೊಬ್ಬ ಬಂದಿದ್ದು, ಇಬ್ಬರೂ ಸೇರಿ, ಅರ್ಪಿತಾ ಅವರನ್ನು ಕಾರಿನಲ್ಲಿ ಎತ್ತಿ ಹಾಕಿದ್ದರು. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ADVERTISEMENT

15 ದಿನಗಳ ಹಿಂದೆ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಮನೆಗೆ ಬಂದಿದ್ದರು. ಈ ವೇಳೆ ಮದುವೆಗೆ ಶಿಕ್ಷಕಿ ಅರ್ಪಿತಾ ಹಾಗೂ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕಿ ಮದುವೆಗೆ ಒಪ್ಪಿಲ್ಲವೆಂದು ಆಕೆಯನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್‌ ಸುಜೀತಾ, ಪರಿಶೀಲನೆ ನಡೆಸಿದರು. ಅಪಹರಣಕಾರರ ಪತ್ತೆಗೆ 3 ತಂಡಗಳನ್ನು ರಚಿಸಲಾಗಿತ್ತು. ಮೊಬೈಲ್‌ ಲೊಕೇಶನ್‌ ಆಧಾರದಲ್ಲಿ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.