ಕೊಣನೂರು: ಹಸಿ ಶುಂಠಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದರೂ, ಶುಂಠಿ ಬಿತ್ತನೆ ಕಾರ್ಯವು ಭರದಿಂದ ಸಾಗಿದೆ. ರೈತರು ಉತ್ಸಾಹದಿಂದ ಶುಂಠಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.
ಕಳೆದ ವರ್ಷ ಹಸಿ ಶುಂಠಿಗೆ ಉತ್ತಮ ಬೆಲೆ ದೊರೆತಿದ್ದು, ಸಾವಿರ ರೂಪಾಯಿಗಳಲ್ಲಿ ಸಿಗುತ್ತಿದ್ದ ಲಾಭವು ಲಕ್ಷ ರೂಪಾಯಿಯಲ್ಲಿ ಸಿಕ್ಕಿದ್ದರಿಂದ ರೈತರ ಉತ್ಸಾಹ ಇಮ್ಮಡಿಯಾಗಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಈ ವರ್ಷ ಶುಂಠಿ ಕೃಷಿಯು ಹೆಚ್ಚಿನ ಆದ್ಯತೆ ಪಡೆಯುತ್ತಿದೆ.
ಈ ಭಾಗದಲ್ಲಿ ಹೊಗೆಸೊಪ್ಪು ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿದ್ದು, ಅದಾಗ್ಯೂ ಶುಂಠಿ ಬೆಳೆಯುವ ಕೃಷಿ ಭೂಮಿಯು ವಿಸ್ತಾರಗೊಳ್ಳುತ್ತಿದೆ. ಮತ್ತೊಂದು ಮುಖ್ಯ ವಾಣಿಜ್ಯ ಬೆಳೆಯಾಗಿ ಪರಿಣಮಿಸುತ್ತಿದೆ.
ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿಯ ದೃಷ್ಟಿಯಿಂದ ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿತ್ತನೆ ಮಾಡುವುದು ಸಾಮಾನ್ಯ. ಈಗಾಗಲೇ ಶುಂಠಿ ನಾಟಿ ಪ್ರಾರಂಭವಾಗಿದೆ. ಉತ್ತಮ ಲಾಭ ಗಳಿಸುವ ನಿರೀಕ್ಷೆಯಲ್ಲಿ ಉತ್ಸಾಹದಿಂದಲೇ ಚಟುವಟಿಕೆ ಆರಂಭಿಸಿರುವ ಬೆಳೆಗಾರರಿಗೆ ಪಿವಿಸಿ ಪೈಪ್, ಕೋಳಿಗೊಬ್ಬರ, ಬಿತ್ತನೆ ಬೀಜದ ಬೆಲೆ ಮತ್ತು ಕೂಲಿಯಲ್ಲಿನ ಹೆಚ್ಚಳವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
2023 ರ ಜನವರಿಯಲ್ಲಿ ಹಸಿಶುಂಠಿ ಬೆಲೆಯು ಪ್ರತಿ 60 ಕೆ.ಜಿ.ಯ ಚೀಲಕ್ಕೆ ₹ 2ಸಾವಿರದಿಂದ ₹ 2,200 ಕ್ಕೆ ಮಾರಾಟವಾಗಿತ್ತು. ಮಾರ್ಚ್ ಮತ್ತು ಏಪ್ಲ್‌ನಲ್ಲಿ ಈ ಬೆಲೆ ₹ 5 ಸಾವಿರ ತಲುಪಿತ್ತು. ಮೇ ಹಾಗೂ ಜೂನ್‌ನಲ್ಲಿ ₹ 10ಸಾವಿರದಿಂದ ₹11 ಸಾವಿರಕ್ಕೆ ಬೆಲೆ ಹೆಚ್ಚಿದ್ದು ಬೆಳೆಗಾರರಲ್ಲಿ ಸಂಚನಲ ಮೂಡಿಸಿತ್ತು.
ಜುಲೈ ಮತ್ತು ಆಗಸ್ಟ್ ನಲ್ಲಿ ಹೊಸ ಶುಂಠಿಯು ಮಾರುಕಟ್ಟೆಗೆ ಬಂದಿದ್ದು, ₹ 3500, ಸೆಪ್ಟೆಂಬರ್‌ನಲ್ಲಿ ₹3,800, ಅಕ್ಟೋಬರ್ನಲ್ಲಿ ₹ 4ಸಾವಿರದಿಂದ₹ 5 ಸಾವಿರ ತಲುಪಿತು. ನವೆಂಬರ್ ಮತ್ತು ಡಿಸೆಂಬರ್ನಲ್ಲಿ ₹4,500ರಿಂದ ₹ 4800, ಈ ವರ್ಷದ ಜನವರಿ -ಫೆಬ್ರುವರಿ ತಿಂಗಳಲ್ಲಿ ₹4,300 ರಿಂದ ₹4ಸಾವಿರದವರೆಗೆ ಬೆಲೆ ಸಿಕ್ಕಿತ್ತು. ಸದ್ಯಕ್ಕೆ ಶುಂಠಿಯ ಬೆಲೆ ₹4,500 ಇದೆ.
ಕಳೆದ ವರ್ಷ ₹2,500 ರಿಂದ ₹3,200 ದೊರೆತಿದ್ದ ಬೀಜದ ಶುಂಠಿಯು, ಈ ವರ್ಷ ಪ್ರತಿ 60 ಕೆ.ಜಿ.ಗೆ ₹ 6,500ಕ್ಕೆ ತಲುಪಿದ್ದು, ದುಬಾರಿ ಎನಿಸಿತು. ಜನವರಿಯ ನಂತರ ಮಾರ್ಕೆಟ್‌ನಲ್ಲಿ ಶುಂಠಿಯ ಬೆಲೆ ಸ್ವಲ್ಪ ಇಳಿಮುಖವಾದ್ದರಿಂದ ಬೀಜದ ಬೆಲೆಯು ತುಸು ಕಡಿಮೆಯಾಗಿದೆ. ಸದ್ಯ ₹5,500 ಕ್ಕೆ ಮಾರಾಟ ಆಗುತ್ತಿದೆ.
ಕೋಳಿಗೊಬ್ಬರ ದುಬಾರಿ: ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುವಲ್ಲಿ ಕೋಳಿಗೊಬ್ಬರಕ್ಕೆ ರೈತರು ಮಹತ್ವ ನೀಡುತ್ತಿರುವುದರಿಂದ ಈ ಬಾರಿ ಕೋಳಿ ಕೊಬ್ಬರದ ಬೆಲೆಯೂ ದುಬಾರಿಯಾಗಿದೆ.
ಪ್ರತಿ ವರ್ಷ ಅಗತ್ಯಕ್ಕೆ ತಕ್ಕಷ್ಟು ಕೋಳಿಗೊಬ್ಬರ ಟನ್‌ಗೆ ₹2,500 ರಿಂದ ₹3ಸಾವಿರಕ್ಕೆ ಸಿಗುತ್ತಿತ್ತು. ಈ ವರ್ಷ ಬೇಡಿಕೆ ಹೆಚ್ಚಿದ್ದರಿಂದ ಟನ್‌ಗೆ ₹3ಸಾವಿರದಿಂದ ₹ 3,500 ಕ್ಕೆ ತಲುಪಿದೆ. ಬೆಲೆ ಎಷ್ಟಿದ್ದರೂ ಕೊಳ್ಳಲು ಜನತೆ ಸಿದ್ಧರಿದ್ದರೂ, ಕೇಳಿದ ಸಮಯಕ್ಕೆ ಸಿಗದೇ ವ್ಯಾಪಾರಿಗಳು ಹೇಳಿದ ಸಮಯಕ್ಕೆ ಕಾದು ತೆಗೆದುಕೊಳ್ಳಬೇಕಿದೆ.
ತಮಿಳುನಾಡಿನಿಂದ ಪ್ರತಿದಿನ ರಾಮನಾಥಪುರಕ್ಕೆ 10 ರಿಂದ 15 ಲಾರಿಗಳು ಕೋಳಿಗೊಬ್ಬರ ಹೊತ್ತು ತರುತ್ತಿದ್ದರೂ ಬೇಡಿಕೆ ತಗ್ಗಿಲ್ಲ, ಗೊಬ್ಬರಕ್ಕಾಗಿ ಬೆಳೆಗಾರರ ಪರದಾಟ ತಪ್ಪಿಲ್ಲ.
ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿಗೆ ತಂತ್ರಜ್ಞಾನ ಬಳಸಲು ಸಲಹೆ ಈ ವರ್ಷ ಶುಂಠಿಗೆ ಉತ್ತಮ ಬೆಲೆ: ರೈತರಲ್ಲಿ ಮತ್ತಷ್ಟು ಉತ್ಸಾಹ
ಅರಕಲಗೂಡು ತಾಲ್ಲೂಕಿನಲ್ಲಿ ಕಳೆದ ವರ್ಷ 1300 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು ಈ ವರ್ಷ 1500 ಹೆಕ್ಟೇರ್ ದಾಟುವ ಸಾಧ್ಯತೆಯಿದೆ.ರಾಜೇಶ್ ಡಿ. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ
ಒಂದು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಸಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ₹ 1 ಲಕ್ಷಕ್ಕಿಂತ ಹೆಚ್ಚು ಖರ್ಚಾಗುತ್ತಿದೆ. ದರ ಉತ್ತಮವಾಗಿ ದೊರೆತಲ್ಲಿ ಲಾಭವಾಗುತ್ತದೆ.ಸತೀಶ್ ಸರಗೂರು ಶುಂಠಿ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.