ಹಳೇಬೀಡು: ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೊಳೆ ರೋಗದಿಂದ ಹಾಳಾಗಿದ್ದ ಶುಂಠಿ, ಈ ವರ್ಷ ಮಳೆ ಇಲ್ಲದೇ ಬೆಂಕಿ ರೋಗಕ್ಕೆ ತುತ್ತಾಗಿದೆ. ರೋಗ ನಿಯಂತ್ರಣಕ್ಕೆ ಬಾರದೇ, ಹಳೇಬೀಡು ಭಾಗದಲ್ಲಿ ಅವಧಿಗೆ ಮೊದಲೇ ಶುಂಠಿ ಕಟಾವು ಮಾಡಲಾಗುತ್ತಿದೆ.
ಶುಂಠಿ ಕೃಷಿ ಪರಿಪೂರ್ಣವಾಗಲು ಒಂದು ವರ್ಷ ಹಿಡಿಯುತ್ತದೆ. ಕೆಲವರು ಒಂದೂವರೆ ವರ್ಷದವರೆಗೂ ಜಮೀನಿನಲ್ಲಿ ಶುಂಠಿ ಕಟಾವು ಮಾಡದೇ ಬೆಳೆಸುತ್ತಾರೆ. ಈ ವರ್ಷ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಹುತೇಕ ರೈತರು 8 ರಿಂದ 9 ತಿಂಗಳಿಗೆ ಶುಂಠಿ ಕಟಾವು ಮಾಡಿ ಕೈತೊಳೆದು ಕೊಳ್ಳುತ್ತಿದ್ದಾರೆ.
ಬೆಂಕಿ ರೋಗ ನಿಯಂತ್ರಣಕ್ಕಾಗಿ ರೈತರು ಮಾಡುತ್ತಿರುವ ಪ್ರಯತ್ನಗಳು ವಿಫಲವಾಗುತ್ತಿವೆ. ಬರಗಾಲ ಆವರಿಸಿದ್ದರಿಂದ ಉಷ್ಣಾಂಶದಿಂದ ಭೂಮಿ ಸೊರಗಿದೆ. ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಬೆಳೆಗೆ ನಿರುಣಿಸಲು ಸಾಧ್ಯವಾಗಲಿಲ್ಲ. ಎರಡು ದಿನದಿಂದ ಉಂಟಾಗಿರುವ ಮೋಡ ಕವಿದ ವಾತಾವರಣದಿಂದಲೂ ಬೆಳೆಗೆ ತೊಂದರೆ ಆಗಬಹುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
60 ಕೆ.ಜಿ. ತೂಕದ ಒಂದು ಚೀಲ ಶುಂಠಿ ₹ 5,200ಕ್ಕೆ ಮಾರಾಟವಾಗುತ್ತಿತ್ತು. ಬೀಜದ ಶುಂಠಿಯ ಬೆಲೆ ₹6ಸಾವಿರ ಮುಟ್ಟಿತ್ತು. ಆದರೆ, ಬೆಲೆ ಈಗ ₹ 4,400 ರಿಂದ ₹4,800ಕ್ಕೆ ಕುಸಿದಿದೆ. ಬೆಲೆ ಇಳಿಕೆಯಾಗುತ್ತಿದ್ದರೂ, ಇಂದಿನ ಬೆಲೆ ರೈತರಿಗೆ ಬಂಪರ್ ಆಗಿದೆ. ಆದರೆ ರೋಗದಿಂದ ಫಸಲು ಕಡಿಮೆಯಾಗಿದ್ದು, ರೈತರಿಗೆ ನಿರೀಕ್ಷಿತ ಪ್ರಮಾಣದ ಹಣ ಕೈಗೆ ಸಿಗುತ್ತಿಲ್ಲ.
‘ಬೆಳೆ ರೋಗಕ್ಕೆ ತುತ್ತಾದರೆ, ಬೆಳವಣಿಗೆ ಕುಂಠಿತವಾಗುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ. ಶುಂಠಿ ಬೆಳೆ ರೋಗಮುಕ್ತವಾಗಿದ್ದರೆ ಮಾತ್ರ ಗುಣಮಟ್ಟದ ಅಧಿಕ ಫಸಲು ಪಡೆಲು ಸಾಧ್ಯ’ ಎನ್ನುತ್ತಾರೆ ರೈತ ಬಂಡಾರಿಕಟ್ಟೆ ರಘು.
ಬಿತ್ತನೆ ಮಾಡಿದ 8 ರಿಂದ 9 ತಿಂಗಳಿಗೆ ಶುಂಠಿ ದೃಢವಾಗುತ್ತದೆ. ಈ ಸಮಯದಲ್ಲಿ ಬೆಳೆ ರೋಗಕ್ಕೆ ತುತ್ತಾದರೆ, ಬೆಳವಣಿಗೆ ಆಗುವುದಿಲ್ಲ. ತೂಕ ಕಡಿಮೆಯಾದರೆ, ಹೆಚ್ಚಿನ ಬೆಲೆ ದೊರಕಿದರೂ ರೈತರಿಗೆ ಪ್ರಯೋಜನ ಆಗುವುದಿಲ್ಲ ಎಂಬ ಮಾತು ಬೆಳೆಗಾರರಿಂದ ಕೇಳಿ ಬರುತ್ತಿದೆ.
‘ಫಲವತ್ತಾದ ಒಂದು ಎಕರೆ ಜಮೀನಿನಲ್ಲಿ 60 ಕೆ.ಜಿ. ತೂಕದ 300 ಚೀಲ ಶುಂಠಿ ಉತ್ಪಾದಿಸಬಹುದು. ರೋಗ ಹತೋಟಿಗೆ ಬಂದರೆ ಉತ್ತಮ ಫಸಲು ತೆಗೆಯಬಹುದು. ಬೆಳವಣಿಗೆ ಹಂತದಲ್ಲಿ ರೋಗಗಳು ಕಾಡಿದರೆ ಶುಂಠಿ ಉತ್ಪಾದನೆ ಕುಂಠಿತವಾಗುತ್ತದೆ. ಈಗ ರೋಗ ತಗುಲಿದ ಜಮೀನಿನಲ್ಲಿ 100ರಿಂದ 120 ಚೀಲ ಮಾತ್ರ ಶುಂಠಿ ದೊರಕುತ್ತಿದೆ’ ಎಂದು ಬಂಡಾರಿಕಟ್ಟೆ ರಘು ಹೇಳಿದರು.
3–4 ತಿಂಗಳು ಮೊದಲೇ ಶುಂಠಿ ಕಟಾವು ಮಾಡುತ್ತಿರುವ ರೈತರು ರೋಗದಿಂದ ಗಡ್ಡೆಯ ಗುಣಮಟ್ಟದ ಬೆಳವಣಿಗೆಗೆ ತೊಡಕು ಒಂದು ಎಕರೆ ಶುಂಠಿ ಬೆಳೆಯಲು ತಗಲುವ ವೆಚ್ಚ ₹5 ಲಕ್ಷ
ಈ ವರ್ಷ ಮಳೆ ಇಲ್ಲದೆ ಅಧಿಕ ಉಷ್ಣಾಂಶದಿಂದ ವಿವಿಧ ಬೆಳೆಗಳು ಸೊರಗುತ್ತಿವೆ. ಸಮ ವಾತಾವರಣ ಇಲ್ಲದೆ ಶುಂಠಿ ಸೊರಗುವುದು ಸಾಮಾನ್ಯವಾಗಿದೆಬಾಲಚಂದ್ರ ರೈತ ಜಿ.ಸಾಣೇನಹಳ್ಳಿ
ರೋಗದ ಕುರಿತು ಪರಿಶೀಲಿಸಲು ಸಹಾಯಕ ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆಯಲ್ಲಿ ರೋಗ ಕಾಣಿಸಿಕೊಂಡಾಗ ರೈತರು ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆಸೀಮಾ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ
ಫಲವತ್ತಾದ ಜಮೀನಿನಲ್ಲಿ ಶುಂಠಿಗೆ ಬೆಂಕಿ ರೋಗ ಕಾಣಿಸಿಕೊಳ್ಳುವುದಿಲ್ಲ. ಎತ್ತರ ಪ್ರದೇಶದ ಕಲ್ಲು ಮಣ್ಣಿನ ಜಮೀನಿನಲ್ಲಿ ರೋಗ ಬಾಧಿಸುತ್ತಿದೆ. ಜಮೀನಿನ ಆಯ್ಕೆ ಮುಖ್ಯವಾದ ಕೆಲಸಶಿವರಾಜ್ ಗೌರಿಕೊಪ್ಪಲು ಶುಂಠಿ ಜಮೀನು ಗುತ್ತಿಗೆದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.