ಆಲೂರು: ಬಿಸಾಡಿದ ಗಾಜಿನ ಬಾಟಲಿಗಳನ್ನು ಶೇಖರಿಸಿ, ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿರುವ ಯುವಕ ಮಾದರಿಯಾಗಿದ್ದಾರೆ. ಮನಸ್ಸು ಮಾಡಿದರೆ ಜೀವನ ನಿರ್ವಹಣೆ ಮಾಡಲು ಹಲವಾರು ಮಾರ್ಗಗಳಿವೆ ಎಂಬುದಕ್ಕೆ ಆಕಾಶ್ ಸಾಕ್ಷಿಯಾಗಿದ್ದಾರೆ.
ಕಸಬಾ ಹುಣಸವಳ್ಳಿ ರಸ್ತೆಯಲ್ಲಿರುವ ಶಿಕಾರಿಪುರ ಗ್ರಾಮದಲ್ಲಿ ವಾಸ ಮಾಡುತ್ತಿರುವ ಆಕಾಶ್, ದ್ವಿತೀಯ ಪಿಯುಸಿ ನಂತರ, ಬಾಟಲಿ ಶೇಖರಣೆ ಮಾಡಿ ಮಾರಾಟ ಮಾಡುವ ಕಾಯಕ ಆರಂಭಿಸಿದರು. ಇದರಿಂದಾಗಿ ಪರಿಸರದ ಸ್ವಚ್ಛತೆಗೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಸ್ತೆ ಬದಿ, ಹೋಟೆಲ್, ಮನೆಗಳಲ್ಲಿ ಗಾಜಿನ ಬಾಟಲ್‍ಗಳು ಹೆಚ್ಚು ಸಂಗ್ರಹವಾಗುತ್ತಿವೆ. ಗ್ರಾಮ ಪಂಚಾಯಿತಿಗಳಲ್ಲಿ, ಬೀದಿ ಬದಿ ಆಯುವವರಿಂದ ಸಂಗ್ರಹವಾಗುವ ಬಾಟಲಿಗಳನ್ನು ಒಂದೆಡೆ ಸಂಗ್ರಹ ಮಾಡುತ್ತಾರೆ. ಸ್ವಂತ ಲಾರಿ ಹೊಂದಿರುವ ಆಕಾಶ್, 15 ದಿನಕ್ಕೊಮ್ಮೆ ಒಂದು ಲೋಡ್‍ನಲ್ಲಿ 270-300 ಚೀಲ ಬಾಟಲಿಗಳನ್ನು ಸಮೀಪದ ಹಾಸನ, ಮೈಸೂರಿಗೆ ಕೊಂಡೊಯ್ಯುತ್ತಾರೆ. ಟನ್‌ಗೆ ₹ 25 ರಿಂದ ₹ 30 ಸಾವಿರವರೆಗೆ ಮಾರಾಟ ಮಾಡುತ್ತಾರೆ. ಕನಿಷ್ಠ ₹ 15 ಸಾವಿರ ಆದಾಯ ಗಳಿಸುತ್ತಿದ್ದಾರೆ. ತಿಂಗಳಿಗೆ ಎರಡು ಲೋಡ್ ಬಾಟಲಿ ಮಾರಾಟ ಮಾಡುತ್ತಿರುವ ಆಕಾಶ್, ಸ್ವಂತ ಲಾರಿ ಹೊಂದಿದ್ದು, ಚಾಲಕರೂ ಇವರೇ.
‘ಶಿಕ್ಷಣ ಮುಗಿದ ನಂತರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ, ಬಾಟಲಿ ಮಾರಾಟಕ್ಕೆ ಧುಮುಕಿದೆ. ಈಗ ಮನೆಯೊಂದನ್ನು ಕಟ್ಟಿಕೊಂಡು, ಲಾರಿ ಹೊಂದುವ ಮೂಲಕ ಇದ್ದುದರಲ್ಲಿ ಉತ್ತಮ ಜೀವನ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಆಕಾಶ್.
‘ಹತ್ತಾರು ವರ್ಷಗಳ ಹಿಂದೆ ಅಲೆಮಾರಿಗಳಂತೆ ಬಂದು ಇಲ್ಲಿ ನೆಲೆಸಿದಾಗ ಅನುಮಾನದಿಂದ ನೋಡುತ್ತಿದ್ದರು. ಅಂದು ದುಡಿದು, ಅಂದೇ ತಿನ್ನುವ ಪರಿಸ್ಥಿತಿ ಇತ್ತು. ಹಗಲು ರಾತ್ರಿ ಎನ್ನದೆ ದುಡಿಮೆಯಲ್ಲಿ ತೊಡಗಿರುತ್ತಿದ್ದೆ’ ಎಂದು ತಾವು ಸಾಗಿದ ದಾರಿಯನ್ನು ವಿವರಿಸುತ್ತಾರೆ ಅವರು.
ಎಲ್ಲಿಂದಲೋ ಬಂದು ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸಿದ ಆಕಾಶ್‌ಗೆ ನೆಲೆಯೂರಲು ಸ್ಥಳೀಯರು ಮಾನವೀಯತೆ ಮೆರೆದು ಶಿಕಾರಿಪುರ ಎಂದು ನಾಮಕರಣ ಮಾಡಿದರು. ಮತದಾರರ ಪಟ್ಟಿಯಲ್ಲಿಯೂ ಸೇರ್ಪಡೆಗೊಂಡರು.
ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣದಿಂದ ಜೀವನೋಪಾಯಕ್ಕೆ ಹಲವಾರು ಮಾರ್ಗಗಳನ್ನು ಹುಡುಕಿಕೊಂಡರು. ಇಂದಿಗೂ ಚಿಂದಿ ಆಯ್ದು ಜೀವನ ಸಾಗಿಸುವವರೂ ಇಲ್ಲಿದ್ದಾರೆ. ವಾಹನಗಳ ಟಿಂಕರಿಂಗ್, ಮೆಕ್ಯಾನಿಕ್ ಕೆಲಸ ಸೇರಿದಂತೆ ಹಲವಾರು ಕೆಲಸಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸುವಲ್ಲಿ ಯಶಸ್ಸು ಹೊಂದಿದ್ದಾರೆ.
‘ಮನೆಯಲ್ಲಿ ಕಷ್ಟದ ಪರಿಸ್ಥಿತಿ ಇದ್ದುದರಿಂದ ಪಿಯುಸಿ ಮುಗಿದ ನಂತರ ಬಾಟಲಿ ಮಾರಾಟ ಆರಂಭಿಸಿದೆ. ಆಲೂರು ತಾಲ್ಲೂಕು ಅಲ್ಲದೇ ಮೂಡಿಗೆರೆ, ಚಿಕ್ಕಮಗಳೂರು, ಹೆತ್ತೂರು, ಕಳಸ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳಿಂದ ಬಾಟಲಿಗಳನ್ನು ಸಂಗ್ರಹಿಸಿ ಫೋನ್ ಮಾಡುತ್ತಾರೆ. ಟನ್ ಲೆಕ್ಕದಲ್ಲಿ ಕೊಂಡು ಮಾರಾಟ ಮಾಡುತ್ತೇನೆ. ರಸ್ತೆ ಬದಿಯಲ್ಲಿ ಆಯ್ದವರು ಇಲ್ಲಿಗೆ ತಂದು ಕೊಡುತ್ತಾರೆ. ತಿಂಗಳಿಗೆ ₹ 30 ಸಾವಿರ ಆದಾಯ ಗಳಿಸಿ ಜೀವನ ಸಾಗಿಸುತ್ತಿದ್ದೇನೆ’ ಎನ್ನುವಾಗ ಆಕಾಶ್ ಮುಖದಲ್ಲಿ ಸಂತಸ ಕಾಣುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.