ಹಾಸನ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಾಕಿ ಇದ್ದ, 5 ವರ್ಷಗಳಿಗಿಂತ ಹಳೆಯದಾದ 60 ಸಾವಿರ ಪ್ರಕರಣಗಳ ಪೈಕಿ 30 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದವುಗಳನ್ನು ಜನವರಿಯೊಳಗೆ ಇತ್ಯರ್ಥಪಡಿಸಲು ಸೂಚಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ನವೆಂಬರ್ ಅಂತ್ಯದೊಳಗೆ ಮುಗಿಸಲು ಸೂಚಿಸಲಾಗಿದೆ’ ಎಂದರು.
‘ನಾನು ಹೇಳಿದಾಕ್ಷಣ ಅಧಿಕಾರಿಗಳು ಮಾಡುವುದಿಲ್ಲ. ನಾವೇ ಅವರ ಬೆನ್ನು ಹತ್ತಬೇಕು. ಹೀಗಾಗಿಯೇ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದೇನೆ’ ಎಂದರು.
‘ಯಾವ ಕಡತ ಎಲ್ಲಿದೆ, ಯಾವ ಹಂತದಲ್ಲಿದೆ ಎಂಬ ಮಾಹಿತಿ ಇ-ಆಫೀಸ್‌ನಲ್ಲಿ ಬೆರಳ ತುದಿಯಲ್ಲಿ ಸಿಗಲಿದೆ. ನೂರರಷ್ಟು ಇ- ಆಫೀಸ್ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೊದಲು ದಾಖಲೆಗಳನ್ನು ಕಳೆದು ಹಾಕಲಾಗುತ್ತಿತ್ತು. ಜನ ಬಂದು ಕೈಮುಗಿದುಕೊಂಡು ನಿಲ್ಲಲಿ ಎಂದು ಕಡತಗಳನ್ನು ಬಾಕಿ ಇಡುವ ಪರಿಸ್ಥಿತಿಯೂ ಇತ್ತು. ಇ-ಆಫೀಸ್ ಮೂಲಕ ಕಂದಾಯ ದಾಖಲೆಗಳ ಡಿಜಿಟಲೀಕರಣದಿಂದ ಅದು ಕಡಿಮೆಯಾಗಲಿದೆ’ ಎಂದರು.
‘ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ಬಳಿ, ಅರ್ಜಿಗಳು 15 ದಿನಗಳಿಗಿಂತ ಹೆಚ್ಚು ದಿನ ಉಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಕುಳಿತು ಕಾಯ್ದೆ, ಕಾನೂನು ಜಾರಿಗೆ ತಂದರೆ ಸಾಲದು. ಅದಕ್ಕಾಗಿ ಬೃಹತ್ ಅಭಿಯಾನ ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.