ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳನ್ನು ಕೂಡಲೇ ಬಾಡಿಗೆ ನಿಗದಿಗೊಳಿಸಿ ಅರ್ಹರಿಗೆ ಹಂಚಬೇಕು, ಮಹಾವೀರ ವೃತ್ತದಲ್ಲಿ ಅನಧಿಕೃತವಾಗಿ ರಸ್ತೆ ಒತ್ತುವರಿ ತೆರವು ಮಾಡುವಂತೆ ನಗರದ ಕಟ್ಟಿನ ಕೆರೆ ಮಾರುಕಟ್ಟೆ ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು .
ನಗರಸಭೆಯ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಆಗಮಿಸಿದ ಒಕ್ಕೂಟದ ಸದಸ್ಯರು ನಗರ ಸಭೆಯ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿದರು .ಈ ವೇಳೆ ಮಾತನಾಡಿದ ಒಕ್ಕೂಟದ ಸದಸ್ಯರು 2018ರಲ್ಲಿ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ 290 ಮಳಿಗೆಗಳನ್ನು ನೀಡಲಾಗಿದೆ. ಇದಕ್ಕೆ ನಗರಸಭೆಯಿಂದ ವರ್ತಕರ ಹೆಸರು ನೋಂದಾಯಿಸಿ ಮಳಿಗೆಗಳಿಗೆ ಶೀಘ್ರವಾಗಿ ಬಾಡಿಗೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ನಗರದ ಮಹಾವೀರ ವೃತ್ತದ ಸಮೀಪ ಸ್ಥಳೀಯ ಸಂಸ್ಥೆ ಜಿಲ್ಲಾಡಳಿತ ಹಾಗೂ ಸರ್ಕಾರದ ವತಿಯಿಂದ ಸುಂದರವಾದ ರಸ್ತೆ ಪಾದಚಾರಿ ಮಾರ್ಗ ವಿದ್ಯುತ್ ದೀಪ ಅಳವಡಿಸಲಾಗಿದೆ. ಆದರೆ ಕೆಲವು ವರ್ತಕರು ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಸಾರ್ವಜನಿಕರು ಸುಗಮ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದಾರೆ.
ಒತ್ತುವರಿ ಮಾಡಿರುವ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ. ಹಾಗಾಗಿ ಮಾರುಕಟ್ಟೆ ವರ್ತಕರಿಗೆ ನಿಗಧಿಪಡಿಸಿದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸೂಚಿಸಬೇಕು ಎಂದು ಮನವಿ ಮಾಡಿದರು.ನಂತರ ಮಾತನಾಡಿದ ಶಾಸಕರು ಇನ್ನೆರಡು ಮೂರು ದಿನದಲ್ಲಿ ಸೂಕ್ತ ಕ್ರಮಕ್ಕೆ ಹಾಗೂ ಮಳಿಗೆ ಹಂಚಿಕೆಗೂ ಆಯುಕ್ತರಿಗೆ ಸೂಚನೆ ನೀಡಿದರು.
ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಆಯುಕ್ತರಾದ ಟಿ.ಎನ್. ನರಸಿಂಹಮೂರ್ತಿ, ಉಪಾಧ್ಯಕ್ಷೆ ಲತಾ ಸುರೇಶ್, ಒಕ್ಕೂಟದ ಸದಸ್ಯರಾದ ಸಮೀರ್ ಅಹಮದ್, ಸೈಯದ್ ವಾಸಿಮ್, ರಘು, ಯೋಗೇಶ್, ಹರೀಶ್, ಮಂಜು, ಮಹೇಶ್, ರವಿ, ಅತೀಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.