ಹಾಸನ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗುರುವಾರದಿಂದ ರೈತರಿಗೆ ಆಲೂಗಡ್ಡೆ ಬಿತ್ತನೆ ಬೀಜ ವಿತರಣೆ ಪ್ರಾರಂಭವಾಗಿದೆ.
ಎಪಿಎಂಸಿ ಸಮೀಪದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಿತ್ತನೆ ಬೀಜ ವಿತರಿಸಲಾಯಿತು. ಈ ವೇಳೆ ಮಾತಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲೆಯಲ್ಲಿನ ಆಲೂಗಡ್ಡೆ ಬೆಳೆಯುವ 15,000 ಎಕರೆ ಭೂಮಿಗೆ ಅವಶ್ಯಕವಿರುವ 20 ಸಾವಿರ ಮೆಟ್ರಿಕ್ ಟನ್ ಬಿತ್ತನೆ ಬೀಜವನ್ನು ಶಿಥಿಲಗೃಹದಲ್ಲಿ ಸಂಗ್ರಹಿಸಲಾಗಿದೆ. ಬೇರೆ ಜಿಲ್ಲೆಯ ರೈತರಿಗೂ ಬಿತ್ತನೆ ಬೀಜ ವಿತರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ವರ್ತಕರು ಈಗಗಲೇ 8,200 ಚೀಲ ಆಲೂಗಡ್ಡೆಯನ್ನು ಪ್ರಾರಂಭಿಕವಾಗಿ ಮಾರುಕಟ್ಟೆಗೆ ತಂದಿದ್ದು, ಬೇಡಿಕೆಗೆ ಅನುಗುಣವಾಗಿ ವರ್ತಕರು ಬಿತ್ತನೆ ಬೀಜಗಳನ್ನು ಪೂರೈಸಲು ಸಿದ್ದರಿದ್ದಾರೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ರೈತರು ಖರೀದಿಸಿದ ಬಿತ್ತನೆ ಬೀಜಕ್ಕೆ ಕಡ್ಡಾಯವಾಗಿ ರಶೀದಿ ಪಡೆಯಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಪಿಎಂಸಿ ಆವರಣದಲ್ಲೇ ನೋಂದಣಿ ಕಾರ್ಯ ಕೈಗೊಳ್ಳಲಿದ್ದು, ರೈತರು ಬಿಲ್‌ನೊಂದಿಗೆ ಆಧಾರ್ ಕಾರ್ಡ್, ಪಹಣಿ, ಪಾಸ್‌ಬುಕ್, ಜಾತಿ ಪ್ರಮಾಣಪತ್ರ ಫೋಟೊಗಳೊಂದಿಗೆ ನೋಂದಣಿ ಮಾಡಿಸಿದಲ್ಲಿ ಶೇಕಡಾ 50 ರಷ್ಟು ಸಬ್ಸಿಡಿ ಹಣ ಹಾಗೂ ಔಷಧಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇಲ್ಲ. ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಆಧರಿಸಿ ಹೆಚ್ಚು ಬೇಡಿಕೆಯ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ಹಾಗೂ ಸಂಚಾರ ದಟ್ಟಣೆ ಆಗದಂತೆ ಪೊಲೀಸ್ ಇಲಾಖೆಯು ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ, ‘ಬಿತ್ತನೆ ಬೀಜವನ್ನು ಸಮರ್ಪಕವಾಗಿ ಪರೀಕ್ಷೆ ನಡೆಸಿ, ಮಾರಾಟಕ್ಕೆ ವ್ಯವಸ್ಥೆಮಾಡಬೇಕು. ಮಾರುಕಟ್ಟೆಗೆ ಬರುವ ಪ್ರತಿ ಲೋಡ್ ಮಾಲು ಪರೀಕ್ಷೆ ಆಗಬೇಕು. ಕಳಪೆ ಬಿತ್ತನೆ ಬೀಜ ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಹೇಳಿದರು
ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಅಧಿಕಾರಿ ಶ್ರೀಹರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.