ADVERTISEMENT

ಆಲೂರು: ವಾಡಿಕೆಗಿಂತ 3.8 ಸೆ.ಮೀ ಹೆಚ್ಚಿನ ಮಳೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:22 IST
Last Updated 13 ಜೂನ್ 2024, 14:22 IST

ಆಲೂರು: ತಾಲ್ಲೂಕಿನಲ್ಲಿ ಜನವರಿಯಿಂದ ಈವರೆಗೆ ವಾಡಿಕೆಗಿಂತ 3.8 ಸೆ.ಮೀ ಹೆಚ್ಚಿನ ಮಳೆಯಾಗಿದ್ದು, ಕೃಷಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.

ಜೂನ್‌ 10ರ ವರೆಗೆ 9.56 ಸೆ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈವರೆಗೆ 13.36 ಸೆ.ಮೀ ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ 9.56 ಸೆ.ಮೀ ವಾಡಿಕೆ ಮಳೆ, ಆದರೆ 12.76 ಸೆ.ಮೀ ಆಗಿದೆ. ಕೆ.ಹೊಸಕೋಟೆ ಹೋಬಳಿಯಲ್ಲಿ 9.72 ಸೆ.ಮೀ ವಾಡಿಕೆ ಮಳೆಗೆ 15.56 ಸೆ.ಮೀ, ಕುಂದೂರು ಹೋಬಳಿಯಲ್ಲಿ 7.92 ಸೆ.ಮೀ ವಾಡಿಕೆ ಮಳೆಗೆ 12.12. ಸೆ,ಮೀ ಹಾಗೂ ಪಾಳ್ಯ ಹೋಬಳಿಯಲ್ಲಿ 9.32 ಸೆ.ಮೀ ವಾಡಿಕೆ ಮಳೆಗೆ 12.52 ಸೆ.ಮೀ ಮಳೆಯಾಗಿದೆ.

2024-25ನೇ ಸಾಲಿಗೆ ತಾಲ್ಲೂಕಿಗೆ ಒಟ್ಟು 15,387 ಹೆಕ್ಟೇರ್ ಕೃಷಿ ಬೆಳೆಗಳ ಬಿತ್ತನೆ ಗುರಿ ಇದೆ. ಈವರೆಗೆ 650 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿರುತ್ತದೆ. ಪ್ರಸ್ತುತ ಬಿತ್ತನೆ ಭರದಿಂದ ಸಾಗಿದ್ದು, ಮುಸುಕಿನ ಜೋಳದ ಬಿತ್ತನೆ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಭತ್ತದಲ್ಲಿ ಸಸಿ ಮಡಿ ತಯಾರಿ ಕಾರ್ಯ ಮುಂದುವರೆದಿದೆ.

ADVERTISEMENT

ತಾಲ್ಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ಮುಸುಕಿನ ಜೋಳ, ರಾಗಿ, ಹೈಬ್ರಿಡ್ ಭತ್ತ ಸೇರಿದಂತೆ ಒಟ್ಟು 490 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದೆ. ಈವರೆಗೆ 116 ಕ್ವಿಂಟಲ್ ಬಿತ್ತನೆ ಬೀಜ ಸಹಾಯಧನದಲ್ಲಿ ವಿತರಣೆಯಾಗಿದ್ದು, 374 ಕ್ವಿಂಟಲ್ ಹಾಲಿ ದಾಸ್ತಾನಿದೆ. ಕೃಷಿ ಬೆಳೆಗಳಾದ ಭತ್ತ, ಮುಸುಕಿನ ಜೋಳ ಹಾಗೂ ರಾಗಿ ಬೆಳೆಗಳಲ್ಲಿ ಬಿತ್ತನೆ ಬೀಜದ ಕೊರತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಖಾಸಗಿ ಮಾರಾಟಗಾರರು ಹಾಗೂ ಸಹಕಾರ ಸಂಘಗಳಲ್ಲಿ 555 ಟನ್‍ ಯೂರಿಯಾ, 159 ಟನ್ ಡಿಎಪಿ, 103 ಟನ್ ಪೊಟ್ಯಾಷ್, 772 ಟನ್ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರ ದಾಸ್ತಾನಿದೆ ಹಾಗೂ ಯಾವುದೇ ಕೊರತೆ ಇರುವುದಿಲ್ಲ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿರುವ ಬಿತ್ತನೆ ಬೀಜಗಳು, ಲಘು ಪೋಷಕಾಂಶಗಳು, ಹಸಿರೆಲೆ ಗೊಬ್ಬರದ ಬಿತ್ತನೆ ಬೀಜ (ಸೆಣಬು), ಟಾರ್ಪಾಲ್‍ಗಳು, ಜೈವಿಕ ಗೊಬ್ಬರಗಳು, ಜೈವಿಕ ಪೀಡೆನಾಶಕ ಹಾಗೂ ರಾಸಾಯನಿಕ ಔಷಧಿಗಳನ್ನು ಸಹಾಯಧನದಲ್ಲಿ ಪಡೆಯಬಹುದಾಗಿದೆ.
ವಿವಿಧ ಕೃಷಿ ಬೆಳೆಗಳಿಗೆ ಸಮತೋಲಿತ ರಸಗೊಬ್ಬರಗಳ ಬಳಕೆ, ಸಮಗ್ರ ಕೀಟರೋಗ ಭಾದೆ ನಿರ್ವಹಣೆ ಹಾಗೂ ಮುನ್ನೆಚ್ಚರಿಕೆ ಕ್ರಮ ವಹಿಸಲು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳು– ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಕಂದಲಿ ಕೃಷಿ ವಿಜ್ಞಾನಕೇಂದ್ರ ಸಂಪರ್ಕಿಸಲು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.