ADVERTISEMENT

ಹಸಿವಿನಿಂದ ನರಳುತ್ತಿರುವ ವೃದ್ದೆ: ಮಕ್ಕಳಿಲ್ಲ, ಆಶ್ರಮಕ್ಕೆ ಹಣ ಕಟ್ಟೋರಿಲ್ಲ..

ಎಚ್.ಎಸ್.ಅನಿಲ್ ಕುಮಾರ್
Published 26 ಅಕ್ಟೋಬರ್ 2024, 6:50 IST
Last Updated 26 ಅಕ್ಟೋಬರ್ 2024, 6:50 IST
ಹೊಟ್ಟೆಪಾಡಿಗೆ ಆಶ್ರಯ ಇಲ್ಲದೇ ಹಳೇಬೀಡು ಸಮೀಪದ ಅಡಗೂರಿನಲ್ಲಿ ನರಳುತ್ತಿರುವ ವೃದ್ದೆ ಕರಿಯಮ್ಮ.
ಹೊಟ್ಟೆಪಾಡಿಗೆ ಆಶ್ರಯ ಇಲ್ಲದೇ ಹಳೇಬೀಡು ಸಮೀಪದ ಅಡಗೂರಿನಲ್ಲಿ ನರಳುತ್ತಿರುವ ವೃದ್ದೆ ಕರಿಯಮ್ಮ.   

ಹಳೇಬೀಡು: ಒಂದು ಹೊತ್ತಿನ ಊಟ ಕೊಡುವವರಿಲ್ಲ. ಆರೋಗ್ಯ ಸ್ಥಿತಿಗತಿ ಕೇಳುವವರಿಲ್ಲದೇ, ಅನಾರೋಗ್ಯಪೀಡಿತ ವೃದ್ಧೆಯೊಬ್ಬರು ಒಂದು ತಿಂಗಳಿನಿಂದ ಶೆಡ್‌ನಲ್ಲಿ ನರಳಾಡುತ್ತಿದ್ದಾರೆ.

ಪತಿಯನ್ನು ಕಳೆದುಕೊಂಡಿರುವ ಅಡಗೂರು ಗ್ರಾಮದ 85 ವರ್ಷದ ವೃದ್ದೆ ಕರಿಯಮ್ಮ, ಮೈಸೂರಿನ ಆಶ್ರಮದಲ್ಲಿದ್ದರು. ಆಶ್ರಮಕ್ಕೆ ಹಣ ಪಾವತಿಸುವವರಿಲ್ಲದೇ, ಕರಿಯಮ್ಮ ಶೆಡ್‌ನಲ್ಲಿ ಜೀವನ ಕಳೆಯುವಂತಾಗಿದೆ. ಒಮ್ಮೊಮ್ಮೆ ಅಜ್ಜಿಯ ರೋದನ ಮುಗಿಲು ಮುಟ್ಟುತ್ತದೆ.

ಪತಿ ದ್ಯಾವೇಗೌಡ ನಿಧನರಾಗಿ 10 ವರ್ಷ ಕಳೆದಿವೆ. ಮಕ್ಕಳು ಇಲ್ಲದ ಇಲ್ಲದ ದಂಪತಿ, ಶ್ರಿಮಂತಿಕೆ ಇಲ್ಲದಿದ್ದರೂ ಊಟ, ಬಟ್ಟೆಗೆ ಕೊರತೆ ಇಲ್ಲದೇ ಸಂತೃಪ್ತ ಜೀವನ ಸಾಗಿಸುತ್ತಿದ್ದರು.

ADVERTISEMENT

‘ಸ್ವಲ್ಪ ಪ್ರಮಾಣದ ಜಮೀನಿನ ಜೊತೆಗೆ ಸಣ್ಣ ವ್ಯಾಪಾರ ಮಾಡಿಕೊಂಡಿದ್ದ ದ್ವಾವೇಗೌಡರು, ಪತ್ನಿಯನ್ನು ಚೆನ್ನಾಗಿ ನೋಡಿಕೊಂಡಿದ್ದರು. ಪತಿ ತೀರಿಕೊಂಡ ನಂತರ ಅಲ್ಪಪ್ರಮಾಣದ ಜಮೀನು ಗುತ್ತಿಗೆ ಕೊಟ್ಟು, ಬಂದ ಆದಾಯದಲ್ಲಿ ಜೀವನ ಸಾಗಿಸಿದ್ದರು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿಜಯ್ ಕುಮಾರ್ ಹೇಳಿದರು.

‘ವಯಸ್ಸಾದಂತೆ ಆರೋಗ್ಯ ತೊಂದರೆ ಕಂಡು ಬಂತು. ಜಮೀನಿನಲ್ಲಿ ಕೃಷಿ ಕೈಗೊಂಡು ದುಡಿಯುವ ಶಕ್ತಿ ಇಲ್ಲದಂತಾಯಿತು. ಅಂತಹ ಸಂದರ್ಭದಲ್ಲಿ ಕರಿಯಮ್ಮ ಜಮೀನು ಮಾರಿಕೊಂಡರು. ವಾಸದ ಮನೆ ಮಾತ್ರ ಉಳಿಯಿತು. ಅವರ ಬಳಿ ಇದ್ದ ಹಣ ಪಾವತಿಸಿ ಸಂಬಂಧಿಕರು ಆಶ್ರಮ ಸೇರಿಸಿದ್ದರು. ಪುನಃ ಹಣ ಪಾವತಿಸುವ ಸಂದರ್ಭ ಬಂದಾಗ, ಕರಿಯಮ್ಮ ಅವರ ಮೈದುನ ಮನೆಯ ಶೆಡ್‌ಗೆ ತಂದು ಹಾಕಿದ್ದಾರೆ. ಮೈದುನ ಸಹ ಪತ್ನಿ ಕಳೆದುಕೊಂಡಿದ್ದಾರೆ. ಅವರಿಗೂ ಮಕ್ಕಳಿಲ್ಲ. ಹೀಗಾಗಿ ಮೈದುನ ಸಹ ಅಸಹಾಯಕರಾಗಿದ್ದಾರೆ’ ಎನ್ನುತ್ತಾರೆ ಅಡಗೂರು ಗ್ರಾಮಸ್ಥರು.

‘ಕರಿಯಮ್ಮ ಪಾರ್ಶ್ವವಾಯು ಪೀಡಿತರಾಗಿದ್ದು, ಶರೀರದ ಬಲ ಭಾಗದಲ್ಲಿ ಸ್ವಾಧೀನ ಇಲ್ಲದಂತಾಗಿದೆ. ಮಲಗಿದ ಜಾಗದಲ್ಲಿಯೇ ಕರಿಯಮ್ಮ ಕಳೆಯುವಂತಾಗಿದೆ. ಗ್ರಾಮದಲ್ಲಿ ಯಾರಾದರೂ ಅಜ್ಜಿಗೆ ಒಪ್ಪತ್ತಿನ ಊಟ ಕೊಡಲು ತಯಾರಿದ್ದಾರೆ. ಅಜ್ಜಿಗೆ ಕುಳಿತು ಊಟ ಮಾಡುವ ಶಕ್ತಿ ಇಲ್ಲ.

ಅಜ್ಜಿಗೆ ಹೊರ ಹೋಗುವುದಕ್ಕೂ ಸಾಧ್ಯವಿಲ್ಲದೇ, ಮಲಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ. ಸ್ವಚ್ಚ ಮಾಡುವವರಿಲ್ಲ ಸರ್ಕಾರಿ ವ್ಯವಸ್ಥೆಯಲ್ಲಿ ಅಜ್ಜಿಯನ್ನು ನೋಡಿಕೊಳ್ಳುವ ವ್ಯವಸ್ಥೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ವಿಜಯ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.