ADVERTISEMENT

ಸ್ವರ್ಣ ರಥದಲ್ಲಿ ಅನಂತನಾಥ ಸ್ವಾಮಿ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 13:21 IST
Last Updated 1 ಅಕ್ಟೋಬರ್ 2023, 13:21 IST
ಶ್ರವಣಬೆಳಗೊಳದಲ್ಲಿ ಭಾನುವಾರ ಸ್ವರ್ಣರಥದಲ್ಲಿ ಅನಂತನಾಥ ಸ್ವಾಮಿಯ ಶೋಭಾ ಯಾತ್ರೆ ನಡೆಯಿತು
ಶ್ರವಣಬೆಳಗೊಳದಲ್ಲಿ ಭಾನುವಾರ ಸ್ವರ್ಣರಥದಲ್ಲಿ ಅನಂತನಾಥ ಸ್ವಾಮಿಯ ಶೋಭಾ ಯಾತ್ರೆ ನಡೆಯಿತು   

ಶ್ರವಣಬೆಳಗೊಳ: ಕ್ಷೇತ್ರದಲ್ಲಿ ನಡೆದ ದಶಲಕ್ಷಣ ಪರ್ವದ ನಿಮಿತ್ತ ಅನಂತನಾಥ ಸ್ವಾಮಿಯ ಮತ್ತು ಕ್ಷಮಾವಾಣಿಯ ಸಮಾರೋಪ ಸಮಾರಂಭದ ಭವ್ಯ ಶೋಭಾಯಾತ್ರೆ ಕಲಾ ತಂಡಗಳ ಆಕರ್ಷಣೆಯೊಂದಿಗೆ ಭಾನುವಾರ ಜರುಗಿತು.

ಅಲಂಕರಿಸಿದ ಸ್ವರ್ಣ ರಥದಲ್ಲಿ 14ನೇ ತೀರ್ಥಂಕರರಾದ ಭಗವಾನ್ ಅನಂತನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಷ್ಟಮಂಗಲಗಳೊಂದಿಗೆ ಸ್ವರ್ಣ ರಥದ ಮುಂಭಾಗ ಪಾತಾಳ ಯಕ್ಷ– ಯಕ್ಷಿಯರನ್ನು ಸಹ ಪ್ರತಿಷ್ಠಾಪಿಸಲಾಗಿತ್ತು. ಭವ್ಯ ಶೋಭಾಯಾತ್ರೆಗೆ ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಸ್ವಾಮೀಜಿ ಉಪಸ್ಥಿತರಿದ್ದರು.

ADVERTISEMENT

ಮೆರವಣಿಗೆಯಲ್ಲಿ ಮಂಗಲವಾದ್ಯ ತಂಡಗಳು, ಮಂಗಳೂರಿನ ಚಂಡೆವಾದ್ಯ, ಅರಸೀಕೆರೆಯ ಚಿಟ್ಟಿಮೇಳ, ಕುದುರೆ, 2 ಬೃಹತ್ ಆನೆಯ ಪ್ರತಿಕೃತಿ, ಧರ್ಮ ಧ್ವಜಗಳನ್ನು ಹಿಡಿದ ಬಾಲಕ ಬಾಲಕಿಯರು, ಕಳಸ ಹೊತ್ತ ಶ್ರಾವಕಿಯರು, ಬ್ರಹ್ಮ, ಯಕ್ಷ ದೇವರು, ರಜತ ಪಲ್ಲಕ್ಕಿಯಲ್ಲಿ ಜಿನವಾಣಿ ಶಾಸ್ತ್ರ, ಶ್ವೇತ ವಸ್ತ್ರಧಾರಿಗಳಾದ ಶ್ರಾವಕರು ಪಾಲ್ಗೊಂಡಿದ್ದರು. ಯುವಕ ಯುವತಿಯರು ನೃತ್ಯ ಮಾಡುತ್ತಾ ಸಾಗಿದ್ದನ್ನು ಜನರನ್ನು ಆಕರ್ಷಿಸಿದರು.

ಅನಂತನಾಥ ಸ್ವಾಮಿಗೆ ಜಯಕಾರ ಹಾಕುತ್ತಾ ಜೈನಮಠ, ಭಂಡಾರ ಬಸದಿಯ ಸುತ್ತ, ಮೈಸೂರು ಕಲ್ಯಾಣಿ, ಬೆಂಗಳೂರು ರಸ್ತೆಗಳ ಮೂಲಕ ಮೆರವಣಿಗೆಯು ಶ್ರೀಮಠಕ್ಕೆ ತಲುಪಿತು. ಭಕ್ತರು ಸಾಲಾಗಿ ನಿಂತು ಅನಂತನಾಥ ಸ್ವಾಮಿಗೆ ಶ್ರೀಫಲ, ಮಂಗಳಾರತಿ ನೀಡಿ ತಮ್ಮ ಭಕ್ತಿ ಸಮರ್ಪಿಸಿದರು.

ಕ್ಷೇತ್ರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ ಯುಗಲ ಮುನಿಗಳಾದ ಅಮೋಘಕೀರ್ತಿ ಮಹಾರಾಜ್, ಅಮರಕೀರ್ತಿ ಮಹಾರಾಜ್ ಆದಿಸಾಗರ ಮಹಾರಾಜ್, ನಿರ್ದೋಷಸಾಗರ ಮಹಾರಾಜ್, ಮಾತಾಜಿಯವರು ಇದ್ದು ದರ್ಶನ ಪಡೆದರು.

ಉತ್ಸವದಲ್ಲಿ ಜಿನೇಶ್, ವಿಮಲ್ ಕುಮಾರ್, ಎಸ್.ಪಿ.ಜೀವೇಂದ್ರಕುಮಾರ್ ಶಾಸ್ತ್ರಿ, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಪಿ.ಯಶಸ್ ಇದ್ದರು.

ಶ್ರವಣಬೆಳಗೊಳದಲ್ಲಿ ಭಾನುವಾರ ಅನಂತನಾಥ ಸ್ವಾಮಿಯ ವೈಭದ ಸ್ವರ್ಣರಥದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು ಹಾಗು ಸ್ರಾವಕ ಶ್ರಾವಕಿಯರು.
ಶ್ರವಣಬೆಳಗೊಳದಲ್ಲಿ ಭಾನುವಾರ ಅನಂತನಾಥ ಸ್ವಾಮಿಯ ವೈಭದ ಸ್ವರ್ಣರಥದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು ಹಾಗು ಸ್ರಾವಕ ಶ್ರಾವಕಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.