ADVERTISEMENT

ಆಲೂರು: ದೇವರಕಟ್ಟೆ ಅಂಗಳದಲ್ಲಿ ಆಂಜನೇಯಸ್ವಾಮಿ

ಮೇ 26 ರಂದು ಪ್ರತಿಷ್ಠಾಪನೆ ಕಾರ್ಯಕ್ರಮ: ಸಾವಿರಾರು ಭಕ್ತಾದಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 25 ಮೇ 2024, 7:50 IST
Last Updated 25 ಮೇ 2024, 7:50 IST
ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಕೆರೆಯಂಗಳದಲ್ಲಿ ವಿಜಯ ಆಂಜನೇಯಸ್ವಾಮಿ ದೇವರ ವಿಗ್ರಹ
ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಕೆರೆಯಂಗಳದಲ್ಲಿ ವಿಜಯ ಆಂಜನೇಯಸ್ವಾಮಿ ದೇವರ ವಿಗ್ರಹ    

ಆಲೂರು: ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಸೊಪ್ಪಿನಹಳ್ಳಿ ಗ್ರಾಮದ ಒಂದೂವರೆ ಎಕರೆ ವಿಸ್ತಾರ ಹೊಂದಿರುವ ದೇವರಕಟ್ಟೆಯಲ್ಲಿ, ಸುಮಾರು 18 ಅಡಿ ಎತ್ತರವಿರುವ ವಿಜಯ ಆಂಜನೇಯಸ್ವಾಮಿ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಮೇ 26 ರಂದು ವಿಜೃಂಭಣೆಯಿಂದ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ.

ಐದು ವರ್ಷಗಳ ಹಿಂದೆ ಬೆಂಗಳೂರಿ ಇಸ್ಕಾನ್ ದೇವಾಲಯದ ವೈಕುಂಠ ಗೌರವದಾಸ್ ಅವರು ಕೆರೆಯಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜಿಲ್ಲೆಯಲ್ಲೆ ಹೆಚ್ಚು ಎತ್ತರದ ಆಂಜನೇಯಸ್ವಾಮಿ ವಿಗ್ರಹ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಗಾಡುವವರಿಗೆ ಅಭಯ ನೀಡುವ ಮೂರ್ತಿ ಇದಾಗಿದೆ.

ADVERTISEMENT

ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಮತ್ತು ಹಾಲಿ ಶಾಸಕ ಸಿಮೆಂಟ್ ಮಂಜು ಅವರ ಶಾಸಕರ ಅನುದಾನದೊಂದಿಗೆ, ಸ್ಥಳೀಯ ಭಕ್ತಾದಿಗಳ ಸಹಕಾರದಿಂದ ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಈ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ರಸ್ತೆಯಂಚಿನಲ್ಲಿರುವ ಕೆರೆಯಲ್ಲಿ, ನೀರಿನೊಳಗೆ ನಿಂತಿರುವ ಮೂರ್ತಿ ಇದಾಗಿದ್ದು, ಅತ್ಯಾಕರ್ಷಕವಾಗಿ ಮೂಡಿ ಬಂದಿದೆ.

ಇತಿಹಾಸ: ಸೊಪ್ಪಿನಹಳ್ಳಿ ಗ್ರಾಮಕ್ಕೆ ಸೇರಿರುವ ಈ ಕಟ್ಟೆಗೆ ಹಿಂದೆ ಚೆನ್ನಿಗರಾಯನ ಕಟ್ಟೆ ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ದೇವರಕಟ್ಟೆ ಎಂದೆ ಪ್ರಖ್ಯಾತಿ ಪಡೆದಿದೆ.

ಸೊಪ್ಪಿನಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ, ಈ ದೇವರಕಟ್ಟೆಯಿಂದ ನೀರು ತೆಗೆದುಕೊಂಡು ಹೋಗಿ ಕುಡಿಸಿದರೆ ರೋಗ ಮಾಯವಾಗುತ್ತಿತ್ತು ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಈ ಕಟ್ಟೆಗೆ ದೇವರಕಟ್ಟೆ ಎಂದು ಹೆಸರಿದೆ ಎಂದು ಪೂರ್ವಿಕರು ಹೇಳುತ್ತಾರೆ.

ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಈ ಕಟ್ಟೆಯಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಜನಸಾಮಾನ್ಯರು ಹೋಗಿ ಬರುವುದಕ್ಕೆ ಸುಸಜ್ಜಿತ ಸುರಕ್ಷತೆಯುಳ್ಳ ದಾರಿ ಮಾಡಲಾಗಿದೆ. ಕೆರೆಯಂಗಳದಲ್ಲಿ ನೆಲೆಸಿರುವ ಹನುಮನನ್ನು ನೋಡಲು ಹಗಲು– ರಾತ್ರಿ ಎನ್ನದೇ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಭೈರಾಪುರ, ಸೊಪ್ಪಿನಹಳ್ಳಿ ಮತ್ತು ಮಣಿಪುರ ಗ್ರಾಮದ ಭಕ್ತಾದಿಗಳು ಸೇರಿ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದಾರೆ. ದೇವರಿಗೆ ಯಾವುದೇ ಗುಡಿಯನ್ನು ನಿರ್ಮಾಣ ಮಾಡದೇ, ಸದಾ ಸಾರ್ವಜನಿಕರಿಗೆ ಅಭಯ ನೀಡಲೆಂದು ಕೆರೆಯಂಗಳದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಭಾನುವಾರ ಬೆಳಿಗ್ಗೆಯಿಂದ ಪೂಜಾ ಕಾರ್ಯಗಳು ಪ್ರಾರಂಭವಾಗಲಿದ್ದು, ಹೋಮ– ಹವನ, ಪ್ರತಿಷ್ಠಾಪನೆ, ಪುಣ್ಯಾಹವಾಚನ, ಮಹಾಮಂಗಳಾರತಿ ನಡೆಯಲಿವೆ. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಕೆರೆಯಂಗಳದಲ್ಲಿ ವಿಜಯ ಆಂಜನೇಯಸ್ವಾಮಿ ದೇವರ ವಿಗ್ರಹ
ಕೆರೆಯ ಅಂಗಳದಲ್ಲಿ ನಿಂತಿರುವ ಆಂಜನೇಯ ಸ್ವಾಮಿ ದೇವರ ವಿಗ್ರಹದ ದರ್ಶನ ಪಡೆಯುವುದೇ ಒಂದು ರೀತಿಯ ಭಾಗ್ಯ. ಈ ಮೂರ್ತಿಯನ್ನು ಜನರನ್ನು ಆಕರ್ಷಿಸುತ್ತಿದೆ.
–ತ್ರೀವೇಣಿ, ಆಲೂರು ನಿವಾಸಿ
ದೇವರಕಟ್ಟೆಯ ಅಂಗಳದಲ್ಲಿ ನಿರ್ಮಿಸಿರುವ ವಿಜಯ ಆಂಜನೇಯ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ದೇವರ ಆರಾಧನೆಗೆ ಸೂಕ್ತ ಸ್ಥಳವಾಗಿದೆ.
– ಕೆ.ಜೆ. ನಾಗರಾಜ್‌, ವಕೀಲ ಆಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.