ಹಾಸನ: ಸಕಲೇಶಪುರ–ಬಾಳ್ಳುಪೇಟೆ ನಡುವಿನ ಮಾರ್ಗದಲ್ಲಿ ಮಣ್ಣು ಭೂಕುಸಿತ ಸಂಭವಿಸಿದ್ದು, ಬೆಂಗಳೂರು–ಮಂಗಳೂರು ನಡುವೆ ಸಂಚರಿಸುವ ರೈಲುಗಳನ್ನು ಅಲ್ಲಲ್ಲಿ ನಿಲುಗಡೆ ಮಾಡಲಾಗಿದೆ. ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲಿಯೇ ನಿಲ್ಲುವಂತಾಗಿದ್ದು, ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ವತಿಯಿಂದ ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಕೆಎಸ್‌ಆರ್ ಬೆಂಗಳೂರು–ಕಣ್ಣೂರು ರೈಲು ಆಲೂರು ನಿಲ್ದಾಣದಲ್ಲಿ, ಎಸ್‌ಎಂವಿಟಿ ಬೆಂಗಳೂರು–ಮುರ್ಡೇಶ್ವರ ಎಕ್ಸ್‌ಪ್ರೆಸ್ ಹಾಸನದಲ್ಲಿ, ಮುರ್ಡೇಶ್ವರ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಹಾಗೂ ಕಣ್ಣೂರು–ಕೆಎಸ್‌ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲುಗಳು ಸಕಲೇಶಪುರದಲ್ಲಿ, ಕಾರವಾರ–ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ದೋಣಿಗಲ್ ನಿಲ್ದಾಣಗಳಲ್ಲಿ ನಿಂತಿವೆ. ಈ ಮಧ್ಯೆ ಹಳಿಯ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.
ಮಧ್ಯರಾತ್ರಿ 12.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ ತಮ್ಮ ಊರುಗಳನ್ನು ಸೇರುವ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರು, ರೈಲುಗಳಲ್ಲಿ ಕುಳಿತುಕೊಳ್ಳುವಂತಾಗಿದೆ. ಊರುಗಳಿಗೆ ತೆರಳಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
ಕೆಲ ರೈಲು ಸಂಚಾರ ರದ್ದು:
ಶನಿವಾರ ಹೊರಡಬೇಕಿದ್ದ ಯಶವಂತಪುರ–ಮಂಗಳೂರು ಜಂಕ್ಷನ್, ಕಣ್ಣೂರು–ಕೆಎಸ್‌ಆರ್ ಬೆಂಗಳೂರು, ಕಾರವಾರ–ಕೆೆಎಸ್‌ಆರ್ ಬೆಂಗಳೂರು, ಮುರ್ಡೇಶ್ವರ–ಎಸ್‌ಎಂವಿಟಿ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು–ಕಣ್ಣೂರು, ಎಸ್‌ಎಂವಿಟಿ ಬೆಂಗಳೂರು–ಮುರ್ಡೇಶ್ವರ, ವಿಜಯಪುರ–ಮಂಗಳೂರು, ಮಂಗಳೂರು ಸೆಂಟ್ರಲ್–ವಿಜಯಪುರ, ಕೆಎಸ್‌ಆರ್ ಬೆಂಗಳೂರು–ಕಾರವಾರ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
ಪ್ರಯಾಣಿಕರಿಗೆ ಬಸ್ ವ್ಯವಸ್ಥೆ
ಹಾಸನ: ಎಲ್ಲ ಆರು ರೈಲುಗಳಲ್ಲಿದ್ದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಅವರು ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡಲಾಗಿದೆ.
ಕೆಲವು ಪ್ರಯಾಣಿಕರು ಬಸ್‌ಗಳಲ್ಲಿ ತೆರಳಲು ಒಪ್ಪಿದ್ದು, ಇನ್ನೂ ಕೆಲವರಿಗೆ ಹಣವನ್ನು ಮರಳಿಸಲಾಗಿದೆ. ಹಾಸನದಲ್ಲಿ ನಿಂತಿದ್ದ ರೈಲುಗಳನ್ನು ಬೆಂಗಳೂರಿಗೆ ಹಾಗೂ ಸಕಲೇಶಪುರದಲ್ಲಿ ನಿಂತಿರುವ ರೈಲುಗಳನ್ನು ಮಂಗಳೂರಿಗೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ.
ಎರಡು ಹಿಟಾಚಿಗಳಿಂದ ತೆರವುಗೊಳಿಸಲಾಗುತ್ತಿದ್ದು, ಒಂದು ವ್ಯಾಗನ್ ಮೂಲಕ ಸ್ಥಳದಿಂದ ಮಣ್ಣು ತೆರವುಗೊಳಿಸಲಾಗುತ್ತಿದೆ. ಇನ್ನೊಂದು ಹಿಟಾಚಿಯನ್ನು ಸ್ಥಳಕ್ಕೆ ಕಳುಹಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.