ಹಾಸನ: ‘ನಮ್ಮ ಮನೆಗೆ ನುಗ್ಗಿ ವ್ಯಕ್ತಿಯೊಬ್ಬ ದೌರ್ಜನ್ಯ ನಡೆಸಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿ ತಾಲ್ಲೂಕಿನ ಗುಡ್ಡೇನಹಳ್ಳಿ ಕೊಪ್ಪಲು ಗ್ರಾಮದ ಸಂತ್ರಸ್ತಕುಟುಂಬದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಗುಡ್ಡೇನಹಳ್ಳಿ ಕೊಪ್ಪಲಿನ ನೊಂದ ಮಹಿಳೆ ಶಾಹಿನಾ ತಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ 25 ವರ್ಷಗಳಿಂದ ನಾವು ಅದೇ ಸ್ಥಳದಲ್ಲಿ ವಾಸವಾಗಿದ್ದೇವೆ. ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕನ್ನು 2020ರ ಅ. 2ರಂದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಡಿ. 2ರಂದು ಅದೇ ಗ್ರಾಮದ ಅಪ್ಪಿಗೌಡ ಎಂಬಾತ ನಮ್ಮ ಮನೆಯಲ್ಲಿ ಮಕ್ಕಳು ಮಾತ್ರ ಇದ್ದ ವೇಳೆ ಮನೆಗೆ ನುಗ್ಗಿ, 2 ಮೊಬೈಲ್ ಹಾಗೂ ಮನೆಯ ಬೀಗದ ಕೀ ಕದ್ದುಕೊಂಡು ಹೋಗಿದ್ದನು. ಈ ಬಗ್ಗೆಯೂ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು’ ಎಂದು ವಿವರಿಸಿದರು.
‘2021ರ ಫೆ. 2ರಂದು ನಮ್ಮ ಮನೆಗೆ ಅಪ್ಪಿಗೌಡನ ಸ್ನೇಹಿತ ಸಂಜು ಎಂಬಾತನಿಗೆ ಮದ್ಯಪಾನ ಮಾಡಿಸಿ ನಮ್ಮ ಮನೆಗೆ ಕಳಿಸಿ ಪೊಲೀಸ್ ಠಾಣೆಯಿಂದ ದೂರು ವಾಪಸ್ ಪಡೆಯುವಂತೆ ಬೆದರಿಸಿ, ಮನೆಯಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾನೆ. ಅಲ್ಲದೇ ನನ್ನ ಮೇಲೂ ಹಲ್ಲೆ ಮಾಡಿದ್ದಾನೆ. ಮಕ್ಕಳು ಶಾಲೆಗೆ ಹೋಗುವಾಗಲೂ ತುಂಬಾ ತೊಂದರೆ ಕೊಡುತ್ತಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಆಕೆಯ ಸಹೋದರ ಆಸೀಫ್ ಪಾಷಾ, ಮಕ್ಕಳು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.