ಅರಸೀಕೆರೆ: ಇಲ್ಲಿನ ಪುರಸಭೆಗೆ ಇದೇ 23 ರಂದು 8 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್‌ನಲ್ಲಿ ಇದ್ದ ವೇಳೆ 7 ಜೆಡಿಎಸ್ ಸ್ಥಾನಗಳು ಮತ್ತು ಒಂದು ಪಕ್ಷೇತರ ಅಭ್ಯರ್ಥಿ ತಮ್ಮದಾಗಿಸಿಕೊಂಡಿದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಅದೇ 8 ಸ್ಥಾನಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ.
ಜೆಡಿಎಸ್ ಆರು ಕ್ಷೇತ್ರಗಳಿಗೆ ಚುನಾವಣಾ ಕಣಕ್ಕೆ ತನ್ನ ಅಭ್ಯರ್ಥಿಗಳನ್ನು ಇಳಿಸಿದ್ದರೆ, ಬಿಜೆಪಿ ನಾಲ್ಕರಲ್ಲಿ ಸ್ಪರ್ಧೆ ನೀಡಿದೆ, ಕಳೆದ ಬಾರಿ ನಗರಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ತೆಕ್ಕೆಗೆ ನಗರಸಭೆ ಒಲಿದಿತ್ತು, ಈಗಲೂ ಆಡಳಿತ ಇದೆಯಾದರೂ ಶಾಸಕರ ಮಾರ್ಗದರ್ಶನದಲ್ಲಿಯೇ ಕಾರ್ಯನಿರ್ವಹಿಸುತ್ತಾ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ.
ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಕಳೆದ ಚುನಾವಣೆಯಂತೆಯೇ ಮತದಾರರ ಮನೆ ಬಾಗಿಲಿಗೆ ಪಾದಯಾತ್ರೆ ಮಾಡುತ್ತಿದ್ದಾರೆ, ನೀರಿನ ಬರ ನೀಗಿರುವುದು ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ದಿಗಳನ್ನು ಮುಂದಿಟ್ಟು ತಮ್ಮ ಎಂಟು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದು ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಹೆಚ್ಚು ಕುತೂಹಲ ಮೂಡಿಸುವುದೆಂದರೆ 25ನೇ ವಾರ್ಡ್ ಇಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎನ್.ವಿದ್ಯಾಧರ್ ಕಳೆದ 5 ಬಾರಿಯಿಂದಲೂ ವಿಜೇತರಾಗಿದ್ದಾರೆ. ಹಿರಿಯ ಸದಸ್ಯರಿಗೆ ಸರಿಯಾದ ಸ್ಥಾನ ಸಿಗಲಿಲ್ಲವೆಂದು ಭಿನ್ನರಾಗಿದ್ದರು, ಮರು ಆಯ್ಕೆಗಾಗಿ ಮತ್ತೆ ಕಣಕ್ಕೆ ಇಳಿದಿದ್ದಾರೆ, ಒಳ್ಳೆಯ ಕೆಲಸಗಾರ ಯಾವುದೇ ವಾರ್ಡಿನ ಜನರಿಗಾದರೂ ಪಕ್ಷಾತೀತವಾಗಿ ಸ್ಪಂದಿಸುವ ವ್ಯಕ್ತಿ. ಆದರೆ ಇದೇ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಯುವನಾಯಕ ದರ್ಶನ್ ಸ್ಪರ್ಧಿಸಿದ್ದು ಈ ಬಾರಿ ವಾರ್ಡಿನ ಪ್ರಬಲ ಸಮುದಾಯಗಳ ಮತ ಹಂಚಿಕೆ ಆಗುವುದರಿಂದ ಶಾಸಕರು ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಹೋರಾಟವಿದೆ.
ಜೆಡಿಎಸ್ ಅಭ್ಯರ್ಥಿಗಳಿಗೆ ಎನ್ ಆರ್ ಸಂತೋಷ್ ಗೆಲುವಿಗಾಗಿ ಪಣತೊಟ್ಟು ಕೆಲಸ ಮಾಡುತ್ತಿದ್ದು ಈ ಸಲ 6 ಸ್ಥಾನಗಳು ಕೂಡ ಗೆಲ್ಲುವು ನಮ್ಮದೇ ಎಂಬ ವಿಶ್ವಾಸವೂ ಕೂಡ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಹಿರಿಯರು ನಿರೀಕ್ಷೆಯಷ್ಟು ಮಟ್ಟದಲ್ಲಿ ಕಾಣಸಿಗುತ್ತಿಲ್ಲ. ಮಂಡಲ ಅಧ್ಯಕ್ಷರು ಪದಾಧಿಕಾರಿಗಳು ಯುವ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯ ಅತಿ ಕಿರಿಯ ಅಭ್ಯರ್ಥಿಯೆಂದರೆ ಜೀವನ್ 15ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದು ಬಹುತೇಕ ನೌಕರ ವರ್ಗ, ಪ್ರಜ್ಞಾವಂತ ಮತದಾರರು ಇದ್ದಾರೆ, ಯಾವ ವಾರ್ಡಿನಲ್ಲಿಯೂ ಮತದಾರರು ಅವರ ನಿಲುವನ್ನು ಬಿಟ್ಟುಕೊಡುತ್ತಿಲ್ಲ, ಯಾರು ಯಾರಿಗೆ ಕೃಪೆ ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.