ADVERTISEMENT

ಅರಸೀಕೆರೆ | ಅಧಿಕಾರಿಗಳು ಗೈರು: ನ್ಯಾಯ ವಿಳಂಬ

ಆರಸೀಕೆರೆ: ಎಸ್‌‌‌ಸಿ, ಎಸ್‌‌ಟಿ ಕುಂದುಕೊರತೆ ಸಭೆಯಲ್ಲಿ ಸಂಘಟನೆಗಳ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 12:28 IST
Last Updated 9 ಜುಲೈ 2024, 12:28 IST
ಅರಸೀಕೆರೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆಯು ಶಾಸಕ ಕೆ.ಎಂ.ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಅರಸೀಕೆರೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆಯು ಶಾಸಕ ಕೆ.ಎಂ.ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.   

ಅರಸೀಕೆರೆ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆ ವಿಳಂಬದ ಜೊತೆ ವಿವಿಧ ಇಲಾಖೆಗಳ ಜವಾಬ್ದಾರಿಯುತ ಅಧಿಕಾರಿಗಳೇ ಗೈರು ಹಾಜರಾಗಿ ನ್ಯಾಯ ದೊರಕಲು ಕಷ್ಟವಾಗುತ್ತಿದೆ’ ಎಂದು ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನಡೆದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಗೃಹಮಂಡಲಿ ಅಧ್ಯಕ್ಷ ಹಾಗು ಶಾಸಕ ಕೆ.ಎಂ ಶಿವಲಿಂಗೇಗೌಡರ ಎದುರು ಉಪಸ್ಥಿತರಿದ್ದ ಮುಖಂಡರು, ಹಿಂದಿನ‌ ಸಭೆಯಲ್ಲಿ ಸಲ್ಲಿಸಲಾಗಿದ್ದ ದೂರುಗಳಿಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಸಭೆಯಲ್ಲಿ ಬಾಣಾವರ ಸ್ಮಶಾನ ಭೂಮಿ ಮಂಜೂರು ಮಾಡಿಕೊಡಲು ವಿಳಂಬ ಆಗುತ್ತದೆ ಎಂದು ಮುಖಂಡ ಬಾಣಾವರ ಮಹೇಶ್ ಸಭೆ ಗಮನ ಸೆಳೆದಾಗ ಬೇಸರಗೊಂಡ ಶಾಸಕ ಕೆ.ಎಂ ಶಿವಲಿಂಗೇಗೌಡ ಒಂದು ತಿಂಗಳೊಳಗೆ ಮಂಜೂರು ಮಾಡಬೇಕೆಂದು ತಹಸೀಲ್ದಾರ್‌‌‌ಗೆ ಸೂಚನೆ ನೀಡಿದರು.

ADVERTISEMENT

ಎಸ್‌‌‌ಸಿಗೆ ಮೀಸಲಾಗಿದ್ದ ನ್ಯಾಯ ಬೆಲೆ ಅಂಗಡಿ ಮಂಜೂರು ವಿಳಂಬವಾಗುತ್ತಿದೆ. ಹತ್ತಾರು ಬಾರಿ ಶಾಸಕರಿಂದ ಫೋನ್ ಮಾಡಿಸಿದರೂ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲು ಅನುವು ಮಾಡಿಕೊಡಲು ಅಧಿಕಾರಿಗಳು ಪ್ರಯತ್ನ ಪಡದೇ ವಿಳಂಬ ಮಾಡುತ್ತಿದ್ದಾರೆ ಎಂಬ ದೂರನ್ನು ಪಡುವನಹಳ್ಳಿ ಗೊಲ್ಲರಹಟ್ಟಿ ಮುಖಂಡ ಶಿವಣ್ಣ ನೀಡಿದಾಗ ಮಧ್ಯ ಪ್ರವೇಶ ಮಾಡಿದ ಆಹಾರ ಶಾಖೆ ಶಿರಸ್ತೇದಾರ್ ಬಾಲಚಂದ್ರ ಡಿಡಿಯವರಿಗೆ ವರದಿ ಸಲ್ಲಿಸಿದೆ ಎಂದು ಸಭೆ ಗಮನ ಸೆಳೆದಾಗ, ಶಾಸಕರು ಒಂದು ತಿಂಗಳ ಒಳಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದರು.

ಜಮೀನುಗಳಿಗೆ ದಾರಿ ಬಿಡದೇ ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದವು. ಬಗರ್ ಹುಕುಂ ಯೋಜನೆಯಲ್ಲಿ ದಲಿತರಿಗೆ ಜಮೀನು ಮಂಜೂರು ವಿಳಂಬವಾಗುತ್ತಿದೆ. ಮನೆಗಳು ಅವಶ್ಯಕತೆ ಇದೆ ಎಂದಾಗ 1.1ಲಕ್ಷ  ಮನೆ ಹಿಂದಿನ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ಮಂಜೂರು ಮಾಡಿದ್ದರೂ ಹಣ ಇಡಲಿಲ್ಲ. ಅದರ ಪರಿಣಾಮ ಮನೆ ನೀಡಲು ಸಾದ್ಯವಾಗಿಲ್ಲ. ಹಿಂದಿನ ಸರ್ಕಾರದ ಯೋಜನೆಗಳ ಪ್ರಕಾರ ಉಳಿದ ಮನೆಗಳ ಅಭಿವೃದ್ಧಿಗೆ ಪ್ರಸ್ತುತ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಾಸನ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ವತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಿಶಿವಮೂರ್ತಿ, ಲೋಕೋಪಯೋಗಿ ಹಿರಿಯ ಸಹಾಯಕ ಅಭಿಯಂತರ ಮುನಿರಾಜ್, ಆರೋಗ್ಯ ಇಲಾಖೆ ಟಿಹೆಚ್‌‌‌‌ಓ ಡಾ.ತಿಮ್ಮರಾಜು, ಜೆ.ಸಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌‌‌ಪೆಕ್ಟರ್ ರಾಘವೇಂದ್ರ ಪ್ರಕಾಶ್, ನಗರ ಠಾಣೆ ಸಬ್ ಇನ್ಸ್‌‌‌ಪೆಕ್ಟರ್ ಲತಾ, ಅರಣ್ಯ ಇಲಾಖೆ ಉಪವಲಯ ಅಧಿಕಾರಿ ಹೇಮಂತ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಯಶೋದಮ್ಮ ಪಾಲ್ಗೊಂಡಿದ್ದರು.

ದಲಿತ ಸಂಘಟನೆ ಮುಖಂಡರಾದ ತಾ.ಪಂ ಅಧ್ಯಕ್ಷ ಗುತ್ತಿನಕೆರೆ ಶಿವಮೂರ್ತಿ, ನಾಗವೇದಿ ಕರಿಯಪ್ಪ, ಜಯಕುಮಾರ್, ಹಬ್ಬನಘಟ್ಟ ರುದ್ರಮುನಿ , ಚಿಕ್ಕಬಾಣಾವರ ವೆಂಕಟೇಶ್, ಅಗ್ಗುಂದ ಎ.ಪಿ ಚಂದ್ರಯ್ಯ, ಮಲ್ಲಿದೇವರಹಳ್ಳಿ ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.