ADVERTISEMENT

ಪುರಾತತ್ವ ಇಲಾಖೆ ತಾತ್ಕಾಲಿಕ ನೌಕರರ ಪ್ರತಿಭಟನೆ

ಇಲಾಖೆ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 1:38 IST
Last Updated 21 ಜನವರಿ 2021, 1:38 IST
ಸೇವೆಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಪುರಾತತ್ವ ಇಲಾಖೆಯ ನೌಕರರು ಸಿಐಟಿಯು ಹಾಗೂ ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ಬುಧವಾರ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಮುಂಭಾಗ ಪ್ರತಿಭಟನೆ ನಡೆಸಿದರು
ಸೇವೆಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಪುರಾತತ್ವ ಇಲಾಖೆಯ ನೌಕರರು ಸಿಐಟಿಯು ಹಾಗೂ ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ಬುಧವಾರ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಮುಂಭಾಗ ಪ್ರತಿಭಟನೆ ನಡೆಸಿದರು   

ಹಳೇಬೀಡು: ಕೆಲಸದಿಂದ ಕೈಬಿಟ್ಟಿರುವುದನ್ನು ಖಂಡಿಸಿ ಇಲ್ಲಿಯ ಹೊಯ್ಸಳೇಶ್ವರ ದೇವಾಲಯದ ಮುಂಭಾಗ ಬುಧವಾರ ಕೇಂದ್ರ ಪುರಾತತ್ವ ಇಲಾಖೆಯ ತಾತ್ಕಾಲಿಕ ನೌಕರರು ಪ್ರತಿಭಟನೆ ನಡೆಸಿದರು.

ಸಿಐಟಿಯು ಹಾಗೂ ಡಿವೈಎಫ್ಐ ಸಂಘಟನೆಗಳ ಸಹಕಾರದೊಂದಿಗೆ ಬೆಂಗಳೂರು ವೃತ್ತ ವ್ಯಾಪ್ತಿಯ ಸ್ಮಾರಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಿವಿಧ ಊರಿನಿಂದ ಬಂದಿದ್ದ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಪುರಾತತ್ವ ಇಲಾಖೆಯಲ್ಲಿ ನಮ್ಮನ್ನು 10ವರ್ಷಕ್ಕೂ ಹಿಂದೆಯೇ ದಿನಗೂಲಿ ನೌಕರರು ಎಂದು ಕೆಲಸಕ್ಕೆ ತೆಗೆದುಕೊಂಡಿದ್ದರು. ನಂತರ ಗುತ್ತಿಗೆ ನೌಕರರು ಎಂದು ಪರಿಗಣಿಸಿದರು. ಆಗ ನಮ್ಮ ಸೇವೆ ಇಲಾಖೆಗೆ ಅಗತ್ಯವಿತ್ತು. ಆದರೆ ಗುತ್ತಿಗೆ ನೌಕರರಿಗೆ ಸಂಬಳ ಕೊಡುವವರು ಯಾರು ಎಂಬ ಮಾಹಿತಿ ಇಲ್ಲದಂತಾಯಿತು. ಸಕಾಲಕ್ಕೆ ವೇತನ ಸಹ ದೊರಕದಂತಾಯಿತು. ಆದರೂ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದೇವು. ನಮ್ಮ ಬವಣೆಯನ್ನು ಗಮನಿಸಿದ ಹೈಕೋರ್ಟ್ ನಮ್ಮನ್ನು ಇಲಾಖೆಯ ನೌಕರರು ಎಂದು ಪರಿಗಣಿಸಿ ಆದೇಶ ನೀಡಿತು. ಕೋರ್ಟ್ ಆದೇಶ ಉಲ್ಲಂಘಿಸಿ ಫಂಡ್ ಇಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ನಮ್ಮನ್ನು ಕೆಲಸದಿಂದ ಕೈಬಿಟ್ಟಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಕಾರರು ತಮ್ಮ ಸಮಸ್ಯೆ ಬಿಚ್ಚಿಟ್ಟರು.

ADVERTISEMENT

ಪುರಾತತ್ವ ಇಲಾಖೆ ಬೆಂಗಳೂರು ವೃತ್ತದ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಮಂದಿ ತಾತ್ಕಾಲಿಕ ಸೇವೆಯಲ್ಲಿದ್ದೇವೆ. ಸಾಕಷ್ಟು ಮಂದಿ 50ರ ಪ್ರಾಯ ದಾಟಿದ್ದಾರೆ. 10ಕ್ಕೂ ಹೆಚ್ಚು ವರ್ಷದಿಂದ ನಾವು ಸೇವೆಯಲ್ಲಿದ್ದೇವೆ. ನಮ್ಮನ್ನು ಇಲಾಖೆ ನೌಕರರೆಂದು ಪರಿಗಣಿಸಿ ಕೆಲಸದಲ್ಲಿ ಮುಂದುವರೆಯಲು ಅವಕಾಶ ನೀಡಬೇಕು. ಹಂತ ಹಂತವಾಗಿ ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಹಳೇಬೀಡಿಗೆ ಆಗಮಿಸಿದ್ದ ಪುರಾತತ್ವ ಇಲಾಖೆಪ್ರಾದೇಶಿಕ ನಿರ್ದೇಶಕಿ ಮಹೇಶ್ವರಿ ಹಾಗೂ ಪುರಾತತ್ವ ಅಧೀಕ್ಷಕ ಡಾ.ಶಿವಕಾಂತ ಭಾಜಪೇಯಿ ಅವರನ್ನು ಪ್ರತಿಭಟನಕಾರರು ಭೇಟಿ ನೀಡಿ ಮನವಿ ಸಲ್ಲಿಸಿದರು.

‘ಈ ಕುರಿತು ಶೀಘ್ರವೇ ನೌಕರರ ಕಡತ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಡಿವೈಎಫ್ಐ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಮುಖಂಡರಾದ ನಾಗರಾಜು, ಮಹಾದೇವ, ಮಂಜುಳಾ, ಪಾರ್ವತಮ್ಮ, ಗಣೇಶ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.