ADVERTISEMENT

ಹಾಸನ: ಜೀತ ವಿಮುಕ್ತ ದಲಿತರಿಗೆ ಭೂಮಿ,ಪುನರ್ವಸತಿಗೆ ಆಗ್ರಹ-ಅರೆ ಬೆತ್ತಲೆ ಮೆರವಣಿಗೆ

ಜೀತ ವಿಮುಕ್ತ ದಲಿತರಿಗೆ ಭೂಮಿ, ಪುನರ್ವಸತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 13:57 IST
Last Updated 22 ಸೆಪ್ಟೆಂಬರ್ 2018, 13:57 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.   

ಹಾಸನ: ಜೀತ ವಿಮುಕ್ತ ದಲಿತರಿಗೆ ಭೂಮಿ ನೀಡಿ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಅರೆ ಬೆತ್ತಲೆ ಮೆರವಣಿಗೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆವರೆಗೂ ಮೆರವಣಿಗೆಯಲ್ಲಿ ಬಂದು ಧರಣಿ ನಡೆಸಿದರು.

‘ತಾಲ್ಲೂಕಿನ ಕಡದರವಳ್ಳಿ, ದೊಡ್ಡಗದ್ದುವಳ್ಳಿ, ಸಾತೇನಹಳ್ಳಿ, ಹರುವನಹಳ್ಳಿ ಹಾಗೂ ಹಂಪನಹಳ್ಳಿ ಗ್ರಾಮದ ಸುಮಾರು 25 ದಲಿತ ಕುಟುಂಬಗಳು ಜೀತ ವಿಮುಕ್ತಿ ಹೊಂದಿದ್ದು, ಜೀವನ ನಡೆಸಲು ಪರದಾಡುತ್ತಿದ್ದಾರೆ. 1976ರಲ್ಲಿ ಅಂದಿನ ಜಿಲ್ಲಾಧಿಕಾರಿ ಜೀತಪದ್ಧತಿ ರದ್ಧತಿ ಕಾಯ್ದೆ ಅನ್ವಯ ಜೀತವಿಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಿದ್ದರಾದರೂ ಕೆಲ ಅಧಿಕಾರಿ ಮತ್ತು ಸವರ್ಣೀಯರ ವಿರೋಧದಿಂದ ಇದುವರೆಗೆ ಫಲಾನುಭವಿಗಳಿಗೆ ನ್ಯಾಯ ಸಿಕ್ಕಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

‘1976ರ ಆ.13ರಂದು ಜೀತವಿಮುಕ್ತ ದಲಿತರಿಗೆ ಸೀಗೆಗುಡ್ಡ ಕಾವಲಿನ ಸರ್ವೆ ನಂ.94ರಲ್ಲಿ 70 ಎಕರೆ ಭೂಮಿ ಮಂಜೂರು ಮಾಡಿ ಸಾಗುವಳಿ ಪತ್ರ ನೀಡಲಾಗಿದೆ. ಕಂದಾಯ ಅಧಿಕಾರಿಗಳು ಸ್ಥಳ ತೋರಿಸಿ ವ್ಯವಸಾಯ ಮಾಡಲು ಅನುವು ಮಾಡಿಕೊಟ್ಟಿದ್ದರು. ಆದರೆ, ಗ್ರಾಮದ ಸವರ್ಣೀಯರು ದೌರ್ಜನ್ಯ ನಡೆಸಿ ಸಾಗುವಳಿ ಮಾಡಲು ಅಡ್ಡಿಪಡಿಸಿದರು. ಅಧಿಕಾರಿಗಳು ಸಹ ಕಷ್ಟಕ್ಕೆ ಸ್ಪಂದಿಸಲಿಲ್ಲ. ಜೀತವಿಮುಕ್ತರಿಗೆ ಮಂಜೂರಾಗಿದ್ದ ಭೂಮಿಯನ್ನು ಮೇಲ್ವರ್ಗದವರಿಗೆ ಖಾತೆ ಮಾಡಿಕೊಟ್ಟು ಅನ್ಯಾಯ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೀತ ವಿಮುಕ್ತರನ್ನು ಗ್ರಾಮೀಣ ಪ್ರದೇಶಗಳಲ್ಲಿ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಇದರಿಂದ ಗ್ರಾಮಗಳಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ದಶಕಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. 25 ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣದಾಸ್, ಖಜಾಂಚಿ ರಾಜು ಡಿ.ಎಂ.ಹಳ್ಳಿ, ಮುಖಂಡರಾದ ರಮೇಶ್ ಸಾತೇನಹಳ್ಳಿ, ಸಿಡ್ಲಯ್ಯ, ಮಲೇಶ್, ಮರಿದಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.