ಅರಕಲಗೂಡು: ‘ಪಕ್ಷಕ್ಕಾಗಿ ದುಡಿದರೂ ಕಾಂಗ್ರೆಸ್ ನನಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿತು. ಆದರೆ ಕ್ಷೇತ್ರದ ಮತದಾರರೇ ನನಗೆ ಹೈಕಮಾಂಡ್ ಆಗಿದ್ದು ಮತ ಭಿಕ್ಷೆ ನೀಡಿ’ ಎಂದು ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೆಗೌಡ ಮನವಿ ಮಾಡಿದರು.
ಪಟ್ಟಣದಲ್ಲಿ ಸೋಮವಾರ ಕೃಷ್ಣೆಗೌಡ ನಾಮಪತ್ರ ವಾಪಸ್ ಪಡೆಯದಂತೆ ಒತ್ತಾಯಿಸಿ ಸಾವಿರಾರು ಅಭಿಮಾನಿಗಳು ಮೆರವಣಿಗೆ ನಡೆಸಿದರು. ಪಟ್ಟಣದ ಬನ್ನಿಮಂಟಪದಿಂದ ಮೆರವಣಿಗೆ ಹೊರಟು ಕೃಷ್ಣೇಗೌಡ ಒಡೆತನದ ಲಕ್ಷ್ಮಿಕಾಂಪ್ಲೆಕ್ಸ್ ಬಳಿ ಜಮಾಯಿಸಿ, ‘ನಿಮ್ಮ ಜತೆ ನಾವಿದ್ದೇವೆ, ನಿಮ್ಮನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸುತ್ತೇವೆ, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಬಾರದು’ ಎಂದು ಆಗ್ರಹಿಸಿದರು.
ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಕೃಷ್ಣೇಗೌಡ,‘ಕಾಂಗ್ರೆಸ್ ಪಕ್ಷವನ್ನು ನನ್ನ ತಾಯಿ ಎಂದು ನಂಬಿ 4 ವರ್ಷದಿಂದ ಸಂಘಟಿಸಿದ್ದೆ. ಎಐಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಶ್ ಇಬ್ಬರೂ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ನಂಬಿಕೆ ಉಳಿಸಿಕೊಳ್ಳಲಿಲ್ಲ. ಸ್ವಾಬಿಮಾನಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿ ಫಾರಂ ನೀಡದೆ ರಾತ್ರಿ 2 ಗಂಟೆಯಲ್ಲಿ ಮನೆಗೆ ಕಳುಹಿಸಿದರು. ಇದರಿಂದ ತುಂಬಾ ಬೇಸರವಾಗಿದೆ. ನಿಮ್ಮ ಅಭಿಮಾನ ಕಂಡ ಬಳಿಕ ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ, ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ, ಯಾವಾಗಲೂ ನಿಮ್ಮೊಂದಿಗಿದ್ದು ತಾಲ್ಲೂಕನ್ನು ಸಮಗ್ರ ಅಭಿವೃದ್ಧಿ ಮಾಡುತ್ತೇನೆ’ ಎಂದು ಮನವಿ ಮಾಡಿದರು.
ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಮಾತನಾಡಿ, ‘ತಾಲ್ಲೂಕಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚಿದಾಗ ನನ್ನ ಸೋದರ ಕೃಷ್ಣೇಗೌಡ ಪಕ್ಷವನ್ನು ಬಲಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಡಿ. ಕೆ. ಸುರೇಶ್ 224 ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಟಿಕೆಟ್ ನೀಡುತ್ತೇವೆಂದು ಭರವಸೆ ನೀಡಿದ್ದರು. ಪಕ್ಷ ಒಂದು ಹಂತಕ್ಕೆ ಬಂದಾಗ ಟಿಕೆಟ್ ನೀಡದೆ ವಂಚಿಸಿದ್ದಾರೆ. ನಿಮ್ಮ ಪಕ್ಷ ಬೇಕಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ಇಂದು ನಾನು ಜನತಾ ನ್ಯಾಯಾಲಯದ ಮುಂದೆ ಬಂದಿದ್ದು, ಅವರು ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು.
ಮುಖಂಡರಾದ ಎಚ್.ಎಸ್. ಶಂಕರ್, ಬಿಳಗೂಲಿ ರಾಮೇಗೌಡ, ಯೋಗೇಶ್, ಕುಮಾರ್, ಪ್ರೊ. ಮಾಯಣ್ಣ, ಪ್ರೊ. ತಿಮ್ಮೇಗೌಡ, ಬಿ.ಆರ್. ಪರಮೇಶ್, ಕಳ್ಳಿಮುದ್ದನಹಳ್ಳಿ ವಾಸು, ಲೋಕೇಶ್, ಕೆ.ಕೆ. ನಾಗರಾಜ್, ಮಿಲ್ಟ್ರಿ ಪುಟ್ಟಸ್ವಾಮಿ, ರಾಧಮ್ಮ, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಜಮೀರ್ ಪಾಷಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.