ADVERTISEMENT

ಅರಕಲಗೂಡು ವಿಧಾನಸಭಾ ಕ್ಷೇತ್ರ: ಕ್ಷೇತ್ರದ ಮೇಲೆ ಪ್ರಭಾವಿಗಳ ಕಣ್ಣು

ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ಗೆ

ಕೆ.ಎಸ್.ಸುನಿಲ್
Published 21 ಫೆಬ್ರುವರಿ 2022, 4:55 IST
Last Updated 21 ಫೆಬ್ರುವರಿ 2022, 4:55 IST
ಎಚ್.ಪಿ.ಶ್ರೀಧರ್ ಗೌಡ
ಎಚ್.ಪಿ.ಶ್ರೀಧರ್ ಗೌಡ   

ಹಾಸನ: ವಿಧಾನಸಭಾ ಚುನಾವಣೆಗೆ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳಿಂದ ಸಿದ್ಧತೆ ನಡೆಯುತ್ತಿರುವಾಗಲೇ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ.

ತಮ್ಮ ವಿರೋಧಿ ಪಕ್ಷಗಳಿಂದ ಮುಖಂಡರನ್ನು ಕಾಂಗ್ರೆಸ್‌ಗೆ ಸೆಳೆಯಲು ಪಕ್ಷದ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಂಸದ ಡಿ.ಕೆ.ಸುರೇಶ್‌ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್‌ ಮತ್ತು ಅವರ ಸಹೋದರ ಮಾಜಿ ಪೊಲೀಸ್‌ ಅಧಿಕಾರಿ ಎಚ್‌.ಪಿ.ಶ್ರೀಧರ್ ಗೌಡ ಅವರು ತಮ್ಮ ಬೆಂಬಲಿಗರ ಜತೆ ಕಾಂಗ್ರೆಸ್‌ ಸೇರಿದ್ದಾರೆ. ಹೊಸ ಮುಖಗಳ ಪ್ರವೇಶದೊಂದಿಗೆ ಸಂಚಲನ ಮೂಡಿದೆ.

ADVERTISEMENT

ಶ್ರೀನಿವಾಸ್ ಅವರು ಹಲವು ವರ್ಷ ಗಳಿಂದ ಜೆಡಿಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಎರಡು ವರ್ಷ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸಹ ಆಗಿದ್ದರು. ತಾಲ್ಲೂಕು ಜೆಡಿಎಸ್ ಘಟಕದಲ್ಲಿ ನಡೆಯುತ್ತಿರುವ ಬೆಳವಣಿಗೆ ಯಿಂದ ಬೇಸತ್ತು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು.

ಶ್ರೀಧರ್ ಗೌಡ ಅವರು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ತೆರೆಮರೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡುತ್ತಿದ್ದ ಉದ್ಯಮಿ ಎಂ.ಸಿ.ಕೃಷ್ಣೇಗೌಡ ಇತ್ತೀಚೆಗೆಷ್ಟೇ ಕೈ ಪಾಳೆಯ ಸೇರಿದ್ದಾರೆ. ಅಲ್ಲದೇ ಮಾಜಿ ಸಚಿವ ಎ.ಮಂಜು ಸಹ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸಿದ್ದರಾ ಮಯ್ಯ ಅವರು ಅಡ್ಡಿ ಆಗಿದ್ದಾರೆ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆಯುತ್ತಿದೆ.

2023ರ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆಇಳಿಯುವ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದ್ದು, ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಹೊಸ ಮುಖಗಳಾದ ಉದ್ಯಮಿ ಕೃಷ್ಣೇಗೌಡ, ಮಾಜಿ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ, ಮುಖಂಡ ಶೇಷೇಗೌಡ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್‌ ಹಾಗೂ ಡಾ.ದಿನೇಶ್ ಭೈರೇಗೌಡ ಟಿಕೆಟ್ ಪಡೆಯುವ ಉದ್ದೇಶದಿಂದ ಸಂಘಟನೆ ಮಾಡುತ್ತಿದ್ದಾರೆ.‌

ಮತ್ತೊಂದೆಡೆ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗಿದೆ. ಇದೀಗ ಎಚ್‌.ಪಿ.ಶ್ರೀನಿವಾಸ್‌ ಸಹೋದರರು ಸೇರ್ಪಡೆ ಆಗಿರುವುದರಿಂದ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಯಾರಿಗೆ ವರಿಷ್ಠರ ಕೃಪಾಕಟಾಕ್ಷ ಎಂಬುದನ್ನು ಕಾದು ನೋಡಬೇಕು.

ಬಿಜೆಪಿ ಸೇರಿ ಮತ್ತೆ ಕಾಂಗ್ರೆಸ್‌ ಕದ ತಟ್ಟುತ್ತಿರುವ ಎ.ಮಂಜು ಅವರಿಗೆ ಮುಂದಿನ ಕಾಂಗ್ರೆಸ್ ಟಿಕೆಟ್‌ ಎಂದು ಹೇಳಲಾಗಿತ್ತು. ಈ ನಡುವೆ ಹೊಸಬರು ಕೈ ಸೇರ್ಪಡೆ ಆಗುತ್ತಿರುವುದರಿಂದ ಟೆಕೆಟ್‌ಗೆ ಪೈಪೋಟಿ ಹೆಚ್ಚಾಗಿದೆ.

‌ಲೋಕಸಭಾ ಚುನಾವಣೆಯಲ್ಲಿ ಎ.ಮಂಜುಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಿಜೆಪಿ ತೊರೆದಿದ್ದ ಪೊಟ್ಯಾಟೋ ಕ್ಲಬ್‌ ಅಧ್ಯಕ್ಷ ಯೋಗಾ ರಮೇಶ್‌ ಮರಳಿ ಪಕ್ಷ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಅವರು ಸಹ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಟೇಶ್‌ ಕುಮಾರ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.