ಹಾಸನ: ಯಾವುದೇ ಉಪ ಚುನಾವಣೆಗಳಲ್ಲಿ ಆಡಳಿತದಲ್ಲಿರುವ ಪಕ್ಷ ಗೆಲ್ಲುವುದು ಸಹಜ. ಅದರಂತೆ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಅಚ್ಚರಿ ಏನಲ್ಲ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ 10 ವಿಧಾನಸಭಾ ಕ್ಷೇತ್ರಗಳಲ್ಲಿ 8 ರಲ್ಲಿ ಗೆದ್ದಿದೆ. ಬಿಹಾರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ 4 ರಲ್ಲಿ 4 ಅನ್ನೂ ಗೆದ್ದಿದೆ. ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಿಜೆಪಿ 5 ಸ್ಥಾನಗಳಲ್ಲಿ ಐದರಲ್ಲೂ ಗೆಲುವು ಸಾಧಿಸಿದೆ. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತ್ರಣಮೂಲ ಕಾಂಗ್ರೆಸ್ 6 ಕ್ಕೆ 6 ರಲ್ಲೂ ವಿಜಯಭೇರಿ ಬಾರಿಸಿದೆ. ಹಾಗೆಯೇ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ 3 ಕ್ಕೆ 3 ಸ್ಥಾನ ಗೆಲ್ಲುವುದರಲ್ಲಿ ದೊಡ್ಡ ಅಚ್ಚರಿ ಏನಲ್ಲ, ಇದು ದೊಡ್ಡ ಸಾಧನೆ ಎಂದು ಬೀಗುವುದು ಬೇಡ ಎಂದಿದ್ದಾರೆ.
ಸರ್ಕಾರ ಇರುವ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕಿದರೆ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದು ಮತದಾರರು ಬಯಸೋದು ಸಹಜ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದ್ದರೂ, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಸಾಕಷ್ಟು ಹಗರಣಗಳಲ್ಲಿ ಮುಳುಗಿರುವ ಈ ಸರ್ಕಾರ, ಉಪ ಚುನಾವಣೆ ಫಲಿತಾಂಶ ನಮ್ಮ ಸರ್ಕಾರಕ್ಕೆ ಸಿಕ್ಕಿರುವ ಜನಾಭಿಪ್ರಾಯ ಎಂದು ಹೇಳುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.