ADVERTISEMENT

ಬೇಲೂರು: ಅಧಿಕಾರಿಗಳ ಮೇಲೆ ಟೆಂಪೋ ಹತ್ತಿಸಲು ಯತ್ನ

ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದ ತಂದೆ, ಮಗ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 20:07 IST
Last Updated 23 ನವೆಂಬರ್ 2024, 20:07 IST
ಬೇಲೂರು ಪಟ್ಟಣ ಸಮೀಪದ ಬಳ್ಳೂರಿನಲ್ಲಿ ಕೆರೆ ಒತ್ತುವರಿ ಸರ್ವೆಗೆ ತೆರಳಿದ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ ನಡೆದ ಸ್ಥಳದಲ್ಲಿ ಪೊಲೀಸರು ಮಹಜರು ಮಾಡಿದರು
ಬೇಲೂರು ಪಟ್ಟಣ ಸಮೀಪದ ಬಳ್ಳೂರಿನಲ್ಲಿ ಕೆರೆ ಒತ್ತುವರಿ ಸರ್ವೆಗೆ ತೆರಳಿದ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ ನಡೆದ ಸ್ಥಳದಲ್ಲಿ ಪೊಲೀಸರು ಮಹಜರು ಮಾಡಿದರು   

ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಚಿಕ್ಕಮೇದೂರು ಗ್ರಾಮಪಂಚಾಯಿತಿಯ ಬಳ್ಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಕೆರೆ ಒತ್ತುವರಿ ಸರ್ವೆ ಮಾಡಲು ತೆರಳಿದ್ದ ಅಧಿಕಾರಿಗಳ ಮೇಲೆ ಟೆಂಪೋ ಹತ್ತಿಸಲು ಯತ್ನಿಸಿ, ಬಂದೂಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ, ಅದೇ ಗ್ರಾಮದ ಯೋಗಾನಂದ ಹಾಗೂ ಆತನ ತಂದೆ ಕೆ.ಎಸ್.ಪದ್ಮಾಕ್ಷೇಗೌಡ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿಡಿಒ ಸಂತೋಷ್ ಅವರ ದೂರಿನಂತೆ, ಆರೋಪಿಗಳ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 221 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ), 109 (ಕೊಲೆ ಯತ್ನ), 352 (ಶಾಂತಿ ಭಂಗ), 351(2), 351(3) (ಅಪರಾಧಕ್ಕೆ ಸಂಚು), 3(5) (ಅಪರಾಧಕ್ಕೆ ಜಂಟಿ ಯತ್ನ), ಅಕ್ರಮ ಶಸ್ತ್ರಾಸ್ತ್ರ ಬಳಕೆ ಪ್ರಕರಣ ದಾಖಲಾಗಿದೆ.

ದೂರಿನ ವಿವರ: ‘ಸರ್ವೆಗೆ ಅಡ್ಡಿ ಪಡಿಸಿ, ಆರೋಪಿಗಳು ಟೆಂಪೋ ಹತ್ತಿಸಲು ಯತ್ನಿಸುತ್ತಿದ್ದಂತೆ, ಸ್ಥಳದಲ್ಲಿದ್ದ ತಾಲ್ಲೂಕು ಮೋಜಿಣಿದಾರ ಗಂಗಾಧರಪ್ಪ, ರೆವೆನ್ಯೂ ಇನ್‌‌ಸ್ಪೆಕ್ಟರ್ ಚಂದ್ರಶೇಖರ್ ಎಚ್.ಪಿ., ಚಿನ್ನೇನಹಳ್ಳಿ ಗ್ರಾಮಾಡಳಿತ ಅಧಿಕಾರಿ ಬಸಪ್ಪಕೆ. ಮತ್ತು ಚಿಕ್ಕಮೇದೂರು ಪಂಚಾಯಿತಿ ಪಿಡಿಒ ಸಂತೋಷ್ ಹಾಗೂ ಅವರೊಂದಿಗಿದ್ದ ಗ್ರಾಮಸ್ಥರು ಭಯಭೀತರಾಗಿ ಜೋಳದ ಹೊಲ, ಬೇಲಿಗಳ ಮೇಲೆ ಜಿಗಿದು ದಿಕ್ಕಾಪಾಲಾಗಿ ಓಡಿದರು. ನಂತರ, ವಾಹನದಿಂದ ಕೆಳಗಿಳಿದ ಆರೋಪಿಗಳು ಬಂದೂಕು ತೋರಿಸಿ, ‘ಸರ್ವೇ ಮಾಡಿದರೆ ಎಲ್ಲರನ್ನೂ ಗುಂಡು ಹಾರಿಸಿ ಕೊಲೆ ಮಾಡುತ್ತೇವೆ’ ಎಂದು ಕೂಗಾಡಿದರು. ಅವಾಚ್ಯ ಶಬ್ದಗಳಿಂದ ಎಲ್ಲರನ್ನೂ ನಿಂದಿಸಿ, ಬೆದರಿಸಿದರು. ಅಲ್ಲಲ್ಲಿ ಚದುರಿದ್ದ ಅಧಿಕಾರಿಗಳು ಕೂಡಲೆ ಮೊಬೈಲ್ ಫೋನ್ ಮೂಲಕ ತಹಶೀಲ್ದಾರ್ ಮಮತಾ ಅವರಿಗೆ ತಿಳಿಸಿ ರಕ್ಷಣೆ ನೀಡುವಂತೆ ಕೋರಿದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ತಹಶೀಲ್ದಾರ್ ಅವರಿಂದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದರು. ಟೆಂಪೋ, ಬಂದೂಕು ಜಪ್ತಿ ಮಾಡಿದರು. ಆರೋಪಿಗಳು ಮೂಲತಃ ತಾಲ್ಲೂಕಿನ ಕೀತೂರು ಗ್ರಾಮದವರಾಗಿದ್ದು, ದಶಕದ ಹಿಂದೆ ಬಳ್ಳೂರು ಸಮೀಪ ಜಮೀನು ಖರೀದಿಸಿ ಕೃಷಿಯೊಂದಿಗೆ, ಕೋಳಿಫಾರಂ ನಡೆಸುತ್ತಿದ್ದಾರೆ.

ತಮ್ಮ ಜಮೀನಿಗೆ ಹೊಂದಿಕೊಂಡಿರುವ ಕೆರೆ ಜಾಗದಲ್ಲಿ ಆರೋಪಿಗಳು ಎರಡು ದಿನಗಳಿಂದ ಅಕ್ರಮವಾಗಿ ಮಣ್ಣು ಎತ್ತುತ್ತಿದ್ದರು. ಆ ಬಗ್ಗೆ ಕೆಲ ಮುಖಂಡರು ದೂರು ನೀಡಿದ್ದರು. ನಂತರ, ಗ್ರಾಮದ ಸರ್ವೆ ನಂಬರ್ 136ರ ಸರ್ವೇ ಮಾಡಿ, ಕೆರೆ ಒತ್ತುವರಿ ಪತ್ತೆ ಹಚ್ಚುವಂತೆ ತಹಶೀಲ್ದಾರ್ ಮಮತಾ ಸಿಬ್ಬಂದಿಗೆ ಸೂಚಿಸಿದ್ದರು.

ಅಧಿಕಾರಿಗಳನ್ನು ಬೆದರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆರೆ ಒತ್ತುವರಿ ತೆರವು ಮಾಡೇ ಮಾಡುತ್ತೇವೆ
ಎಂ.ಮಮತಾ ತಹಶೀಲ್ದಾರ್ ಬೇಲೂರು ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.