ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ ‘ಅಶ್ವಮೇಧ’ (ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್- ಕ್ಲಾಸಿಕ್) ಲೋಕಾರ್ಪಣೆ ಮಾಡಲಾಗಿದ್ದು ಹಾಸನ ಸಾರಿಗೆ ವಿಭಾಗಕ್ಕೆ 10 ಬಸ್‌ಗಳನ್ನು ಒದಗಿಸಲಾಗಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ನೂತನ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ್ದು, ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸುಖಕರ ಪ್ರಯಾಣದ ಅನುಭವ ಒದಗಿಸುವ ಉದ್ದೇಶವಿದೆ.
ಮಂಗಳವಾರ (ಫೆ.6)ದಿಂದ ಅಶ್ವಮೇಧ ಬಸ್‌ಗಳು ರಸ್ತೆಗೆ ಇಳಿಯಲಿದ್ದು, ಪ್ರತಿ ಗಂಟೆಗೆ ಒಂದರಂತೆ ಸಾರಿಗೆ ಸೇವೆ ಒದಗಿಸಲಿದೆ. ಈಗಾಗಲೇ 10 ಬಸ್‌ಗಳನ್ನು ಜಿಲ್ಲೆಗೆ ನೀಡಲಾಗಿದ್ದು, ಪ್ರಯಾಣಿಕರಿಗೆ ಇಲಾಖೆಯಿಂದ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯಾಗಿದೆ ಎಂದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್ ಹೇಳಿದರು.
ಹಾಸನ -ಬೆಂಗಳೂರು ಮಾರ್ಗದಲ್ಲಿ ಈಗಿರುವ ತಡೆರಹಿತ ಸಾರಿಗೆ ಬಸ್‌ಗಳ ಬದಲಿಗೆ ಈ ನೂತನ ಬಸ್‌ಗಳನ್ನು ಓಡಿಸುವ ಕುರಿತು ನಿರ್ಧರಿಸಲಾಗಿದೆ.ದೀಪಕ್ ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
ಈ ಬಸ್‌ಗಳಲ್ಲಿ ಶಕ್ತಿ ಯೋಜನೆಯೂ ಅನ್ವಯವಾಗಲಿದ್ದು, ಮಹಿಳಾ ಪ್ರಯಾಣಿಕರಿಗೆ ಉಚಿತ ಸೇವೆ ಒದಗಿಸಲಾಗುತ್ತಿದೆ. ಈ ನೂತನ ಬಸ್‌ಗಳನ್ನು ಮದುವೆ ಸಮಾರಂಭ, ಶಾಲಾ– ಕಾಲೇಜು ವಾರ್ಷಿಕ ಪ್ರವಾಸ ಸೇರಿದಂತೆ ಇತರೆ ಒಪ್ಪಂದದ ಮೂಲಕವೂ ಒದಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆ ಜಾರಿಯಿಂದ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರಿಗೆ ಬಸ್‌ಗಳ ಬೇಡಿಕೆ ಹೆಚ್ಚಿದೆ. ಇದೀಗ 10 ನೂತನ ಅಶ್ವಮೇಧ ಬಸ್‌ಗಳನ್ನು ಒದಗಿಸಿರುವ ಕಾರಣ, ಈ ಹಿಂದೆ ಬಳಸಲಾಗುತ್ತಿದ್ದ ತಡೆರಹಿತ ಬಸ್‌ಗಳನ್ನು ಇತರೆ ಮಾರ್ಗಗಳಿಗೆ ಓಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ನೂತನವಾಗಿ ರಸ್ತೆಗಳಿದಿರುವ ಅಶ್ವಮೇಧ ಬಸ್‌ಗಳಲ್ಲಿ ಉತ್ತಮವಾದ ಆಸನದ ವ್ಯವಸ್ಥೆ, ಹೊಸ ವಿನ್ಯಾಸಗಳು ಪ್ರಯಾಣಿಕರನ್ನು ಆಕರ್ಷಣೆ ಮಾಡಲಿದೆ. ನೂತನ ಬಸ್‌ಗಳ ಸೇವೆ ಆರಂಭವಾಗಲಿದ್ದು, ತಡೆರಹಿತ ಸಾರಿಗೆ ಸೇವೆ ಬಳಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಮಾಹಿತಿ ನೀಡಿದರು.
ಅಶ್ವಮೇಧ ಬಸ್‌ನಲ್ಲಿ ತಾಂತ್ರಿಕ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವದೊಂದಿಗೆ ಜನಸ್ನೇಹಿ ಸೇವೆ ದೊರೆಯುವ ವಿಶ್ವಾಸವಿದೆ. ಸಾರಿಗೆ ಇಲಾಖೆ ವಿಭಾಗೀಯ ಸಂಚಾರ ಅಧಿಕಾರಿ ವಿ.ಸತೀಶ್ ತಿಳಿಸಿದ್ದಾರೆ.
ಅಶ್ವಮೇಧ ಬಸ್‌ಗಳ ವಿಶೇಷತೆ
ಬಸ್‌ಗಳ ಎತ್ತರ 3.42 ಮೀಟರ್
52 ಆಸನ ಬಕೆಟ್ ರೀತಿಯ ವಿನ್ಯಾಸ
ಮುಂದೆ ಹಿಂಭಾಗದಲ್ಲಿ ವಿಶಾಲ ಗಾಜು
ದೊಡ್ಡದಾದ ಕಿಟಕಿ ಗಾಜು ಟಿಂಟೆಡ್ ಗಾಜು
ಬಸ್‌ನಲ್ಲಿ ಲೋಕೇಶನ್ ಟ್ರ್ಯಾಕರ್ ಪ್ಯಾನಿಕ್ ಬಟನ್
ಬಸ್ ಮುಂಭಾಗದಲ್ಲಿ ಎಲ್‌ಇಡಿ ಫಲಕ
ಲಗೇಜ್ ಕ್ಯಾರಿಯರ್‌ಗಳ ವಿನೂತನ ವಿನ್ಯಾಸ
ಚಾಲಕ ಕಂ ನಿರ್ವಾಹಕ ಸೇವೆ
ತಡೆರಹಿತ ಸೇವೆ ಗಂಟೆಗೆ 70 ಕಿ.ಮೀ. ವೇಗ
ಚಾಲಕರ ಅನುಕೂಲಕ್ಕೆ ದೊಡ್ಡ ಮಿರರ್
ಪಾರ್ಕಿಂಗ್ ಕ್ಯಾಮೆರಾ ಅಳವಡಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.