ಹೊಳೆನರಸೀಪುರ: ತಾಲ್ಲೂಕಿನ ಬಾಗಿವಾಳು ಗ್ರಾಮದಲ್ಲಿ ಯುಗಾದಿ ಹಬ್ಬದದಂದು ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಬಾಂಧವ್ಯದ ಬಿಂದಿಗೆ ಜಾತ್ರೆ ಮಂಗಳವಾರ ಸರಳವಾಗಿ ನಡೆಯಿತು.
ವೀರಶೈವ ಜನಾಂಗದ ಜಂಗಮ ಪಂಗಡಕ್ಕೆ ಸೇರಿದ ದಿವಂಗತ ಚಂದ್ರಪ್ಪನವರ ಮಗ ರಮೇಶ ಬಿಂದಿಗೆ ಕರಗ ಹೊತ್ತು ನರ್ತಿಸುತ್ತಾ ಬಿಂದಿಗೆ ಜಾತ್ರೆ ನಡೆಸಿಕೊಟ್ಟರು. ಪದ್ದತಿಯಂತೆ ಶಿವರಾತ್ರಿ ಹಬ್ಬದಿಂದ ವ್ರತಾಚರಣೆಯಲ್ಲಿದ್ದು, ಐದು ದಿನಗಳಿಂದ ಉಪವಾಸದಲ್ಲಿದ್ದು ಯುಗಾದಿ ಹಬ್ಬದ ದಿನ ಗ್ರಾಮದ ಶ್ರೀರಾಮೇಶ್ವರ ದೇವಾಲಯ ಹಾಗೂ ಹೇಮಾವತಿ ನದಿ ತೀರದಲ್ಲಿ ಪೂಜೆ ಸಲ್ಲಿಸಿ ತಲೆಯ ಮೇಲೆ ಬಿಂದಿಗೆ (ಕರಗ) ಹೊತ್ತು ಬಾಗಿವಾಳು ಗ್ರಾಮ ಹಾಗೂ ಕಡುವಿನಹೊಸಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮದೇವತೆ ಅಂಜನೇಯ ಮತ್ತು ಬಸವೇಶ್ವರ ದೇವಾಲಯಗಳಿಗೆ ಪ್ರದಕ್ಷಿಣೆ ಹಾಕಿ ಬಂದ ನಂತರ ಗ್ರಾಮದಲ್ಲಿ ಬಿಂದಿಗೆ ನೃತ್ಯ ಪ್ರದರ್ಶಿಸಿ, ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಿದರು.
ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರು ಬಿಂದಿಗೆ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.