ಹಾಸನ: ರಾಜಕೀಯ ಜಂಜಾಟ, ಹಗರಣಗಳ ನಡುವೆ ಭರ್ತಿಯಾಗಿರುವ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆಯ ಗಳಿಗೆ ಕೂಡಿ ಬರುತ್ತಿಲ್ಲ. ಉಳಿದೆಲ್ಲ ಜಲಾಶಯಗಳಿಗೆ ಬಾಗಿನ ಅರ್ಪಿಸಿರುವ ಮುಖ್ಯಮಂತ್ರಿ ಹೇಮಾವತಿಗೆ ಬಾಗಿನ ಅರ್ಪಿಸಲು ಹಿಂದೇಟು ಹಾಕುತ್ತಿರುವುದು ಏಕೆ ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.
ಜಿಲ್ಲೆಯ ಜೀವನಾಡಿ ಹಾಗೂ ರಾಜ್ಯದ ಕೆಅರ್‌ಎಸ್ ಜಲಾಶಯಕ್ಕೆ ತನ್ನದೆಯಾದ ಕೊಡುಗೆ ನೀಡುವ ಹೇಮಾವತಿ ಜಲಾಶಯ ಭರ್ತಿಯಾಗಿ ಹಲವು ವಾರಗಳೆ ಕಳೆದಿವೆ. ರಾಜ್ಯದ ಬಹುತೇಕ ಜಲಾಶಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲವೆಡೆ ಮುಖ್ಯಮಂತ್ರಿ ಬಾಗಿನ ಅರ್ಪಿಸಿದ್ದಾರೆ.
ಆದರೆ ಪ್ರತಿ ವರ್ಷ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಣಾ ಕಾರ್ಯಕ್ರಮ ಜರುಗುತ್ತಿತ್ತು. ಆದರೆ ಈ ಬಾರಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹಲವು ವಾರಗಳ ಕಳೆದರೂ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿಲ್ಲ ಎನ್ನುವ ದೂರು ಜನರದ್ದಾಗಿದೆ.
49 ವರ್ಷದಲ್ಲಿ 33ನೇ ಬಾರಿ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಹಲವಾರು ವಾರಗಳಿಂದ ಜಲಾಶಯ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ. ಮುಂದಿನ ಕೆಲವು ದಿನಗಳು ಮಾತ್ರ ಜಲಾಶಯ ಭರ್ತಿ ಇರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಬಹುದೆಂಬ ಜಿಲ್ಲೆಯ ಜನರು ಕಾಯುತ್ತಿದ್ದಾರೆ.
2022 ರಲ್ಲಿ ಜುಲೈ 25ರಂದು ಹಾಗೂ 2020ರಲ್ಲಿ ಆಗಸ್ಟ್ 21ರಂದು ಉಸ್ತುವಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ ಬಾಗಿನ ಅರ್ಪಿಸಿದ್ದರು. ಆದರೆ ಈ ವರ್ಷ ಸೆಪ್ಟೆಂಬರ್ 18 ಕಳೆದರೂ ಹೇಮಾವತಿ ಜಲಾಶಯಕ್ಕೆ ಬಾಗಿನದ ಭಾಗ್ಯ ಲಭ್ಯವಾಗದೇ ಇರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಆಗಸ್ಟ್ 15 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಮುಂದಿನ ಕೆಲದಿನಗಳಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಹೇಳಿದ್ದರು.
ಅದಾದ ನಂತರ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರ ತಂಡದವೇ ಜಿಲ್ಲೆಯ ಸಕಲೇಶಪುರ ತಾಲ್ಲೂಕಿಗೆ ಬಂದಿತ್ತು. ಆ ಸಂದರ್ಭದಲ್ಲಾದರೂ ಹೇಮಾವತಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.
ಮುಂದಿನ ಕೆಲ ವಾರ ಜಲಾಶಯ ಗರಿಷ್ಠ ಮಟ್ಟ ಕಾಯ್ದುಕೊಳ್ಳಲಿದೆ. ಉಸ್ತುವಾರಿ ಸಚಿವರು ಸಹ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಬರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಅರುಣ್ ಹೇಮಾವತಿ ಜಲಾಶಯದ ಎಂಜಿನಿಯರ್
ಕಾಂಗ್ರೆಸ್ ಸರ್ಕಾರ ಜಿಲ್ಲೆಯನ್ನು ತಾತ್ಸಾರದಿಂದ ಕಾಣುತ್ತಿದೆ. 2–3 ಬಾರಿ ಜಿಲ್ಲೆಗೆ ಬಂದರೂ ಬಾಗಿನ ಅರ್ಪಿಸಲು ಮುಖ್ಯಮಂತ್ರಿಗೆ ಸಮಯ ಸಿಕ್ಕಿಲ್ಲ. ನೆರೆ ಹಾವಳಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರೂ ಪರಿಹಾರ ಬಿಡುಗಡೆ ಅಗಿಲ್ಲ.ಹೊಂಗೆರೆ ರಘು ಜೆಡಿಎಸ್ ಜಿಲ್ಲಾ ಘಟಕದ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.