ADVERTISEMENT

ಹಾಸನ | ಸುರಕ್ಷಿತ ಸ್ಥಳಕ್ಕೆ ನಿರ್ಗತಿಕರ ಸ್ಥಳಾಂತರ

ನಗರಸಭೆ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 15:45 IST
Last Updated 27 ಆಗಸ್ಟ್ 2020, 15:45 IST
ಹಾಸನ ನಗರದಲ್ಲಿ ಭಿಕ್ಷುಕರು ಮತ್ತು ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಪೊಲೀಸರು
ಹಾಸನ ನಗರದಲ್ಲಿ ಭಿಕ್ಷುಕರು ಮತ್ತು ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಪೊಲೀಸರು   

ಹಾಸನ: ನಗರಸಭೆ, ಜಿಲ್ಲಾ ಪೊಲೀಸ್‌ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ, ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ, ಸುರಕ್ಷಿತ ಸ್ಥಳದಲ್ಲಿ ತಾತ್ಕಾಲಿಕ ಆಶ್ರಯ ಒದಗಿಸಲಾಯಿತು.

ಎರಡು ದಿನಗಳ ಹಿಂದೆಯಷ್ಟೇ ನಗರದ ಎನ್‌.ಆರ್‌. ವೃತ್ತದಲ್ಲಿ ನಡೆದ ನಿರ್ಗತಿಕ ಮಹಿಳೆ ಕೊಲೆ ಹಾಗೂ ಅತ್ಯಾಚಾರ ಘಟನೆ ಬಳಿಕ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಮೊದಲ ದಿನ 46 ಮಂದಿಯನ್ನು ರಕ್ಷಿಸಿ, ಮಿನಿ ಬಸ್‌ನಲ್ಲಿ ಕರೆದೊಯ್ಯಲಾಯಿತು.

ಎಲ್ಲರಿಗೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ ಬಳಿಕ ಪುರ್ನವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ನಗರ
ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲೂ ಕೆಲ ದಿನಗಳವರೆಗೆ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ನಗರದ ಹೊಸ ಬಸ್‌ ನಿಲ್ದಾಣ, ಮಹಾರಾಜ ಉದ್ಯಾನ, ಎನ್‌.ಆರ್‌.ವೃತ್ತ, ಹಾಸನಾಂಬ ಕಲಾಕ್ಷೇತ್ರ ಮುಂಭಾಗ, ರೈಲ್ವೆ ನಿಲ್ದಾಣ, ಬಸ್‌ ತಂಗುದಾಣ, ರಿಂಗ್ ರಸ್ತೆಯ ಪಾದಚಾರಿ ಮಾರ್ಗವೇ ನಿರ್ಗತಿಕರು, ಭಿಕ್ಷುಕರ ಸೂರಾಗಿದೆ. ಭಿಕ್ಷೆ ಬೇಡಿ ಅಷ್ಟು ಇಷ್ಟು ಸಂಪಾದಿಸುವ ಮಹಿಳೆಯರು ರಾತ್ರಿಯಾದರೆ ವಾಸ್ತವ್ಯಕ್ಕೆ ಜಾಗವಿಲ್ಲದೆ ಪರದಾಡುವಂತಾಗಿದೆ. ಮಳಿಗೆ, ದೊಡ್ಡ ಕಟ್ಟಡಗಳ ಮುಂದಿನ ಜಾಗದಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಟ್ಟಿನಕೆರೆ ಮಾರುಕಟ್ಟೆಯ ಕಟ್ಟಡದಲ್ಲಿ ಪುರುಷರ ನಿರಾಶ್ರಿತರ ಕೇಂದ್ರವನ್ನು ನಗರಸಭೆ ತೆರೆದಿದ್ದು, ನಿರ್ಗತಿಕರು, ಭಿಕ್ಷುಕರು, ಆಶ್ರಯ ವ್ಯವಸ್ಥೆಯಿಲ್ಲದ ಕೂಲಿ ಕಾರ್ಮಿಕರು ರಾತ್ರಿ ಮಲಗಲು ವ್ಯವಸ್ಥೆ ಮಾಡಲಾಗಿದೆ. ಊಟ, ಹಾಸಿಗೆ ವ್ಯವಸ್ಥೆ ಇದೆ. ಮೈಸೂರಿನ ಕ್ರೆಡಿಟ್‌ ಐ ಸಂಸ್ಥೆ ಕೇಂದ್ರದ ಜವಾಬ್ದಾರಿ ವಹಿಸಿಕೊಂಡಿದ್ದು, ನಗರಸಭೆ ವಾರ್ಷಿಕ ₹ 5 ಲಕ್ಷ ಅನುದಾನ ನೀಡುತ್ತಿದೆ. ಆದರೆ ನಿರ್ಗತಿಕ ಮಹಿಳೆಯರಿಗೆ ಈ ರೀತಿಯ ವ್ಯವಸ್ಥೆ ಮಾಡಿಲ್ಲ.

‘ಭಿಕ್ಷುಕರು, ನಿರ್ಗತಿಕರು ಮತ್ತು ಮಾನಸಿಕ ಅಸ್ವಸ್ಥರಿಗೆ ಒಂದೆಡೆ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಈ ಕಾರ್ಯಾಚರಣೆ ಹಲವು ದಿನ ಮುಂದುವರಿಯಲಿದೆ. ನಗರದಲ್ಲಿ ಮಹಿಳೆಯರ ನಿರಾಶ್ರಿತ ಕೇಂದ್ರ ತೆರೆದಿಲ್ಲ. ಆದರೆ ಕೆಲವು ಕಡೆ ತಾತ್ಕಾಲಿಕವಾಗಿ ಜಿಲ್ಲಾ ಕೇಂದ್ರದಲ್ಲಿ ತೆರೆಯಲಾಗಿದೆ. ಅವರನ್ನು ಮೈಸೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಲಿದೆ. ನಿರ್ಗತಿಕರು, ಭಿಕ್ಷುಕರನ್ನು ಕಂಡರೆ ಸಾರ್ವಜನಿಕರು ನಗರಸಭೆ ಅಥವಾ ಪೊಲೀಸರಿಗೆ ತಿಳಿಸಬೇಕು’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಮನವಿ ಮಾಡಿದರು.

‘ನಗರದಲ್ಲಿ ವಿವಿಧೆಡೆ ಬೀಡು ಬಿಟ್ಟಿದ್ದ ಭಿಕ್ಷುಕರಿಗೆ ಒಂದೆಡೆ ಆಶ್ರಯ ಒದಗಿಸುವ ಕೆಲಸ ಮಾಡಲಾಗುತ್ತಿದೆ. ನಗರಸಭೆ
ವ್ಯಾಪ್ತಿಯಲ್ಲಿ ವಸತಿ ರಹಿತ 30 ಮಂದಿ ಪುರುಷರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುವುದು. ಆದರೆ, ಮಹಿಳೆಯರು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಮಹಿಳಾ ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿಪ್ರಸ್ತಾವ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಬಳಿಕ ಕಟ್ಟಡ ನಿರ್ಮಿಸಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೇಂದ್ರ ತೆರೆಯಲಾಗುವುದು’ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.