ಹಾಸನ:ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಸನಾಂಬೆ ಗುರುವಾರ ಮಧ್ಯಾಹ್ನ 12.17ಕ್ಕೆ ವಿಶ್ವರೂಪ ದರ್ಶನ ನೀಡಿದಳು.
ಸಂಪ್ರದಾಯದಂತೆ ದೇಗುಲದ ಗರ್ಭಗುಡಿ ಬಾಗಿಲು ತೆರೆದೊಡನೆ ಮೈಸೂರು ಅರಸು ಮನೆತನದ ನರಸಿಂಹರಾಜ ಅವರು ಬಾಳೆ ಕಂದು ಕಡಿದರು. ಭಕ್ತರು, ಜನಪ್ರತಿನಿಧಿಗಳುಜಯಘೋಷ ಮೊಳಗಿಸಿ ಭಾವಪರವಶರಾದರು.
ಗರ್ಭಗುಡಿ ಬಾಗಿಲು ತೆರೆದ ನಂತರ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕಾನೂನು ಸಚಿವ
ಜೆ.ಸಿ.ಮಾಧುಸ್ವಾಮಿ, ಶಾಸಕರು, ಗಣ್ಯರುದೇವಿಯ ದರ್ಶನ ಪಡೆದರು.
ಕೋವಿಡ್ ಭೀತಿಯ ಕಾರಣಕ್ಕೆ ಈ ಬಾರಿ ಸಾರ್ವಜನಿಕ ದರ್ಶನ ನಿಷೇಧಿಸಲಾಗಿದೆ. ಮೊದಲ ದಿನ ಮತ್ತು ಕೊನೆ ದಿನ ಗಣ್ಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಿಷೇಧದ ನಡುವೆಯೂ ಸಾವಿರಾರು ಭಕ್ತರು ಬ್ಯಾರಿಕೇಡ್‌ಗಳನ್ನು ನೂಕಿ ದೇವಾಲಯದ ಆವರಣ ಪ್ರವೇಶಿಸಿದರು. ದರ್ಶನ ಪಡೆಯಲು ತಳ್ಳಾಟ ನಡೆಯಿತು. ಮಧ್ಯಾಹ್ನ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂತು.
ಗುರುವಾರದಿಂದ ಮಹೋತ್ಸವದ ಅಂತಿಮ ದಿನವಾದ ನ.16ರವರೆಗೆ ನಿತ್ಯ ಮಧ್ಯಾಹ್ನ ಎರಡು ತಾಸು ದೇವಿಗೆ ನೈವೇದ್ಯ ನಡೆಯಲಿದೆ. ಈ ಸಮಯದಲ್ಲಿ ದರ್ಶನ ಇರುವುದಿಲ್ಲ. ಬಲಿಪಾಡ್ಯಮಿಯ ಮರುದಿನ ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳನ್ವಯ ಪೂಜೆ ನೆರವೇರಿಸಿ, ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಜಾತ್ರಾ ಮಹೋತ್ಸವವನ್ನು ಆನ್‌ಲೈನ್ ನಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
'ದೇವಿಯ ಮುಂಭಾಗದಲ್ಲಿ ಕಳೆದ ವರ್ಷ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಹಚ್ಚಲಾಗಿದ್ದ ನಂದಾದೀಪ ಉರಿಯುತ್ತಲೇ ಇತ್ತು. ಕೊರೊನಾ ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ' ಎಂದು ಸಚಿವ ಗೋಪಾಲಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.