ಹಾಸನ: ‘ಹಣ ಮತ್ತು ಅಧಿಕಾರದ ಆಸೆಯಿಂದ ಕೆಲವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ’ ಎಂದು ಅನರ್ಹ ಶಾಸಕರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಚ್.ವಿಶ್ವನಾಥ್ ಅವರಿಗೆ ದೇವೇಗೌಡರು ಪುನರ್ಜನ್ಮ ನೀಡಿದರು. ಹಾಗೆಯೇ ಗೋಪಾಲಯ್ಯ ಅವರೂ ಹೇಗೆ ಗೆದ್ದರು? ಯಾರೇ ಆಗಲಿ ತಾವು ಬೆಳೆದು ಬಂದ ಹಾದಿಯನ್ನು ಮರೆಯಬಾರದು. ಕೆಲವೇ ದಿನಗಳಲ್ಲಿ ಉಪ ಚುನಾವಣೆ ಬರಲಿದ್ದು, ಧನದಾಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.
‘ಸಮ್ಮಿಶ್ರ ಸರ್ಕಾರ ಪತನವಾಗಿದೆ. ಹಿಂದೆ ಅನೇಕ ಸಂದರ್ಭಗಳಲ್ಲಿ ನಾವು ಎದ್ದು ಬಂದಿದ್ದೇವೆ. ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ’ ಎಂದು ಹೇಳಿದರು.
ತಂದೆ ಎಚ್.ಡಿ.ರೇವಣ್ಣ ಅವರಿಂದಲೇ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂಬ ಆರೋಪಕ್ಕೆ ಕಿಡಿ ಕಾರಿದ ಪ್ರಜ್ವಲ್, ‘ಇದೆಲ್ಲಾ ಯಾರೋ ಮಾಡುತ್ತಿರುವ ಸುಳ್ಳು ಆರೋಪ. ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿ ಎಷ್ಟೊಂದು ಕೆಲಸ ಮಾಡಿದ್ದಾರೆ. ಯಾವು ಕ್ಷೇತ್ರಕ್ಕೆ, ಯಾವ ಪಕ್ಷದ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ದಾಖಲೆ ಕೊಡಲು ಸಿದ್ಧ’ ಎಂದರು.
ಮೈತ್ರಿ ಸರ್ಕಾರ ಪತನವಾಗಲು, ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಎಂಬ ಆರೋಪಕ್ಕೆ ಉತ್ತರ ಕೊಡಲು ಪ್ರಜ್ವಲ್ ನಿರಾಕರಿಸಿದರು.
ಬಿಜೆಪಿ ಸರ್ಕಾರ ಎಷ್ಟು ದಿನ ನಡೆಯುತ್ತೋ ನೋಡೋಣ. ಏಕೆಂದರೆ ಸಂಪುಟ ಸಂಕಟ ವಿಷಯದಲ್ಲಿ ಅಲ್ಲೂ ಕೂಡ ಅನೇಕ ಸಮಸ್ಯೆಗಳಿವೆ. ಹೀಗಾಗಿ ಸರ್ಕಾರ ಎಷ್ಟು ದಿನ ಉಳಿಯಲಿದೆ ನೋಡಬೇಕು ಎಂದರು.
ನಗರದಲ್ಲಿ ತ್ಯಾಜ್ಯ ವಿಲೇವಾರಿ, ಒಳಚರಂಡಿ ವ್ಯವಸ್ಥೆ ಹಾಗೂ ಶಿಕ್ಷಣ ಕುರಿತು ಜಿಲ್ಲಾಧಿಕಾರಿ ಅಕ್ರಂ ಪಾಷ ಜತೆ ಚರ್ಚಿಸಲಾಗಿದೆ. ಚುನಾವಣೆ ವೇಳೆ ನಾಗರಿಕರು ಗಮನಕ್ಕೆ ತಂದಿದ್ದ ಸಮಸ್ಯೆಗಳ ಬಗ್ಗೆಯೂ ಅವರಿಗೆ ಹೇಳಿದ್ದೇನೆ. 28 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿಯೇ ಎರಡು ಎಕರೆ ಜಾಗ ಮೀಸಲು ಇಡಲಾಗಿದೆ. ಆರು ತಿಂಗಳಲ್ಲಿ ನಗರದಲ್ಲಿ ಕಸ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.