ADVERTISEMENT

ಬೇಲೂರು: 38 ಮಂಗಗಳಿಗೆ ಮೊದಲ ವರ್ಷದ ಪುಣ್ಯತಿಥಿ

ಬಜರಂಗ ದಳ, ಕೇಸರಿ ಯುವ ಪಡೆ, ವಿಎಚ್‌ಪಿ ಕಾರ್ಯಕರ್ತರಿಂದ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 4:44 IST
Last Updated 1 ಆಗಸ್ಟ್ 2022, 4:44 IST
ಬೇಲೂರು ತಾಲ್ಲೂಕಿನ ತಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಂಗಗಳ ಮೊದಲನೇ ವರ್ಷದ ಪುಣ್ಯತಿಥಿ ನೆರವೇರಿಸಲಾಯಿತು. ರಘು, ಸಂತೋಷ್ ಕೆಂಚಾಂಬ, ಆದೇಶ್, ಕೃಷ್ಣೇಗೌಡ ಇದ್ದರು
ಬೇಲೂರು ತಾಲ್ಲೂಕಿನ ತಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಂಗಗಳ ಮೊದಲನೇ ವರ್ಷದ ಪುಣ್ಯತಿಥಿ ನೆರವೇರಿಸಲಾಯಿತು. ರಘು, ಸಂತೋಷ್ ಕೆಂಚಾಂಬ, ಆದೇಶ್, ಕೃಷ್ಣೇಗೌಡ ಇದ್ದರು   

ಬೇಲೂರು (ಹಾಸನ ಜಿಲ್ಲೆ): ಮಂಗಗಳ ಮೊದಲ ವರ್ಷದ ಪುಣ್ಯತಿಥಿಯನ್ನು ಬಜರಂಗ ದಳ, ಕೇಸರಿ ಯುವ ಪಡೆ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಾನುವಾರ ನೆರವೇರಿಸಿದರು.

ಉಗನೆ ಹಾಗೂ ಕ್ಯಾತನಹಳ್ಳಿಯಲ್ಲಿ ಸೆರೆ ಹಿಡಿದ ಕೋತಿಗಳನ್ನು ಗೋಣಿ ಚೀಲಗಳಲ್ಲಿ ಕಟ್ಟಿ ಕಳೆದ ವರ್ಷದ ಜುಲೈ 29ರಂದು ತಾಲ್ಲೂಕಿನ ಚೌಡನಹಳ್ಳಿ ಬಳಿ ಬಿಸಾಡಿದ್ದರು. ಇದರಲ್ಲಿ 38 ಕೋತಿಗಳು ಮೃತಪಟ್ಟಿದ್ದವು. ತಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ಕಾರ್ಯಕರ್ತರು ಸಮಾಧಿಗೆ ವಿಶೇಷ ಹೂವಿನ‌ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ ಹನುಮಾನ್ ಚಾಲೀಸ ಪಠಿಸಿ ಪುಣ್ಯತಿಥಿ ನೆರವೇರಿಸಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ADVERTISEMENT

ಬಜರಂಗ ದಳದ ಪ್ರಾಂತ್ಯ ಸಹ ಸಂಚಾಲಕ ರಘು ಮಾತನಾಡಿ, ‘ಹಿಂದೂಗಳ ದೈವ ಆಂಜನೇಯನ ಪ್ರತಿರೂಪದ ಮಂಗಗಳನ್ನು ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿತ್ತು. ಈಗ ಪುಣ್ಯತಿಥಿ ಮಾಡಿದ್ದೇವೆ. ಈ ಸ್ಥಳದಲ್ಲಿ ಉದ್ಯಾನ, ಸ್ಮಾರಕ ನಿರ್ಮಿಸಲು ಶಾಸಕ ಕೆ.ಎಸ್.ಲಿಂಗೇಶ್ ಭೂಮಿಪೂಜೆ ಮಾಡಿದ್ದರು. ಆದರೆ ಈವರೆಗೂ ಕಾಮಗಾರಿ ನಡೆದಿಲ್ಲ. ಈ ಸ್ಥಳವನ್ನು ವಿಶೇಷ ಧಾರ್ಮಿಕ ಸ್ಥಳವನ್ನಾಗಿ ರೂಪಿಸುತ್ತೇವೆ’ ಎಂದರು.

‘ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ. ಇದರ ಹಿಂದೆ ಪಿಎಫ್‌ಐ ಮತ್ತು ಎಸ್‌ಟಿಪಿಐ ಸಂಘಟನೆಗಳ ಕೈವಾಡವಿದೆ. ಹಿಂದೂಗಳಲ್ಲಿ ಭೀತಿ ಸೃಷ್ಟಿಸುವ ಉದ್ದೇಶದಿಂದ ಹತ್ಯೆ ಮಾಡಲಾಗಿದೆ. 2047ರ ವೇಳೆಗೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಪಿಎಫ್‌ಐ ಹೇಳಿದೆ. ಆದ್ದರಿಂದ ಹಿಂದೂಗಳು ಜಾತಿ–ಮತ ಬಿಟ್ಟು ಸಂಘಟಿತರಾಗಬೇಕು. ಮುಸ್ಲಿಂ ಮೂಲಭೂತವಾದಿಗಳೊಂದಿಗೆ ಆರ್ಥಿಕ ವ್ಯವಹಾರ ನಿಲ್ಲಿಸಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಶಿವಮೊಗ್ಗದ ಹರ್ಷ ಅವರನ್ನು ಕೊಲೆ ಮಾಡಿದವರಿಗೆ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲಾಗಿದೆ. ಮುಖ್ಯಮಂತ್ರಿಯು ಉತ್ತರಪ್ರದೇಶದಂತೆ ಬುಲ್ಡೋಜರ್ ಸಂಸ್ಕೃತಿ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ರಾಷ್ಟ್ರಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್ ಕೆಂಚಾಂಬ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ, ಕೇಸರಿ ಯುವ ಪಡೆ ಅಧ್ಯಕ್ಷ ಆದೇಶ್, ವೀರಾಂಜನೇಯ ಸ್ವಾಮಿ ದೇಗುಲದ ಅಧ್ಯಕ್ಷ ಮೋಹನ್, ಬಜರಂಗ ದಳದ ಮಂಜುನಾಥ್, ಮೊಗಸವರ ಕೌಶಿಕ್, ಗ್ರಾ.ಪಂ ಸದಸ್ಯ ತೇಜಕುಮಾರ್ ಶೆಟ್ಟಿ, ಹಿರೀಕೊಲೆ ಚಂದನ್ ಸಂದೀಪ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.