ADVERTISEMENT

ನಾಡು– ನುಡಿಗೆ ಹೋರಾಡಿದವರ ಸ್ಮರಿಸಿ: ಶಾಸಕ ಸುರೇಶ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 15:31 IST
Last Updated 1 ನವೆಂಬರ್ 2024, 15:31 IST
ಬೇಲೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಶಾಸಕ ಎಚ್.ಕೆ.ಸುರೇಶ್, ತಹಶೀಲ್ದಾರ್ ಎಂ.ಮಮತಾ, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಪಾಲ್ಗೊಂಡಿದ್ದರು
ಬೇಲೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಶಾಸಕ ಎಚ್.ಕೆ.ಸುರೇಶ್, ತಹಶೀಲ್ದಾರ್ ಎಂ.ಮಮತಾ, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಪಾಲ್ಗೊಂಡಿದ್ದರು   

ಬೇಲೂರು: ಕನ್ನಡ ನಾಡಿಗಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಿಸಿ, ಗೌರವಿಸುವ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬೇಲೂರು ತಾಲ್ಲೂಕು ತನ್ನದೇ ಆದ ಹಿರಿಮೆ, ಗರಿಮೆಯನ್ನು ಹೊಂದಿದ್ದು, ಈ ನೆಲದಲ್ಲಿ ದಕ್ಷ ಆಳ್ವಿಕೆಯನ್ನು ನೀಡಿದ ಹೊಯ್ಸಳ ರಾಜ ವಿಷ್ಣುವರ್ಧನನು, ಶಿಲ್ಪಕಲೆ, ಸಾಹಿತ್ಯ, ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ನಾವು ಇಂದಿಗೂ ಕಾಣಬಹುದಾಗಿದೆ. ಕನ್ನಡದ ಪ್ರಪ್ರಥಮ ಶಿಲಾ ಶಾಸನ ಸಿಕ್ಕಿದ ಹಲ್ಮಿಡಿ ಗ್ರಾಮ ನಮ್ಮದೇ ತಾಲ್ಲೂಕಿನಲ್ಲಿರುವುದು ಹೆಮ್ಮೆ ಪಡುವ ಸಂಗತಿ ಎಂದರು.

ADVERTISEMENT

ತಹಶೀಲ್ದಾರ್ ಎಂ.ಮಮತಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಲ್ಮಿಡಿಯಿಂದ ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ಕರವೇ ಅಧ್ಯಕ್ಷ ಚಂದ್ರಶೇಖರ್, ಅನಂತರಾಜೇಅರಸು  ತಂದಿದ್ದ ಕನ್ನಡ ಜ್ಯೋತಿಯನ್ನು ಬಸವೇಶ್ವರ ವೃತ್ತದಲ್ಲಿ ಶಾಸಕ ಎಚ್.ಕೆ.ಸುರೇಶ್, ತಹಶೀಲ್ದಾರ್ ಎಂ.ಮಮತಾ ಹಾಗೂ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಬರಮಾಡಿಕೊಂಡರು. ಬಸವೇಶ್ವರ ವೃತ್ತದಿಂದ ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ನಾಡಧ್ವಜದೊಂದಿಗೆ ಕಾರ್ಯಕ್ರಮಕ್ಕೆ ಜ್ಯೋತಿಯನ್ನು ತಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 14 ಜನರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶ್ರೀಮಾರುತಿ ಯುವಜನ ಸಂಘದಿಂದ ತರಲಾದ ಭುವೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಯುನೈಟೆಡ್ ಅಕಾಡೆಮಿ ಶಾಲೆಯ ಸಾಲುಮರದ ತಿಮ್ಮಕ್ಕ ಸ್ತಬ್ಧ ಚಿತ್ರ ಆಕರ್ಷಕವಾಗಿತ್ತು. ಸರ್ಕಾರಿ ಪದವಿಪೂರ್ವ ಕಾಲೇಜು, ಬೇಲೂರು ಪಬ್ಲಿಕ್ ಸ್ಕೂಲ್, ವಿವೇಕಾನಂದ ಶಾಲೆ, ವಿಶ್ವ ಆಂಗ್ಲಮಾಧ್ಯಮ ಶಾಲೆ, ಉರ್ದು ಕ್ಲಸ್ಟರ್ ಶಾಲೆಯಿಂದ ವಿವಿಧ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು. ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಹೊಯ್ಸಳ ಟ್ರ್ಯಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಮೀಸೆ ಮಹೇಶ್ ಗೌಡ ನೇತೃತ್ವದಲ್ಲಿ ಉಚಿತವಾಗಿ ಟ್ರಾಕ್ಟರ್ ವ್ಯವಸ್ಥೆ ಮಾಡಲಾಗಿತ್ತು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಉಪಾಧ್ಯಕ್ಷೆ ಉಷಾ ಸತೀಶ್, ಬೇಲೂರು-ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್‌ತೌಫಿಕ್ ಮಾತನಾಡಿದರು. ಬಿಇಒ ರಾಜೇಗೌಡ, ಕರವೇ ಪ್ರವೀಣಶೆಟ್ಟಿ ಬಣದ ಅಧ್ಯಕ್ಷ ಭೋಜೇಗೌಡ, ಡಾ.ವಿಜಯ್, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತೀರ್ಥಂಕರ್, ಪುರಸಭೆ ಸದಸ್ಯ ಬಿ.ಎ.ಜಮಾಲೂದ್ದೀನ್, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.