ADVERTISEMENT

ಹಾಸನಾಂಬ ದರ್ಶನ: ₹17 ಲಕ್ಷ ಮೊತ್ತದ ಟಿಕೆಟ್‌ ಮಾರಾಟ

ಹಾಸನಾಂಬ ದರ್ಶನಕ್ಕೆ ವಿದೇಶದಿಂದಲೂ ಟಿಕೆಟ್ ಬುಕಿಂಗ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:54 IST
Last Updated 26 ಅಕ್ಟೋಬರ್ 2024, 6:54 IST
ಹಾಸನಾಂಬ ದರ್ಶನೋತ್ಸವಕ್ಕೆ ಸಿದ್ಧಪಡಿಸಿರುವ ಆ್ಯಪ್‌
ಹಾಸನಾಂಬ ದರ್ಶನೋತ್ಸವಕ್ಕೆ ಸಿದ್ಧಪಡಿಸಿರುವ ಆ್ಯಪ್‌   

ಹಾಸನ: ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ದರ್ಶನ ಪಡೆಯಲು ರಾಜ್ಯವಲ್ಲದೇ, ನೆರೆ ರಾಜ್ಯ ಹಾಗೂ ರಾಷ್ಟ್ರಗಳಿಂದಲೂ ಆನ್‌ಲೈನ್‌ ಮೂಲಕ ಟಿಕೆಟ್ ಬುಕಿಂಗ್ ಮಾಡಿರುವ ಮಾಹಿತಿ ಲಭ್ಯವಾಗಿದೆ.

ದೇವಿಯ ದರ್ಶನದ ಮಾಹಿತಿ ಹಾಗೂ ಸೌಲಭ್ಯಗಳಿಗಾಗಿ ಹಾಸನಾಂಬ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಇದುವರೆಗೆ ಸುಮಾರು ₹7 ಲಕ್ಷಕ್ಕೂ ಹೆಚ್ಚು ಮೊತ್ತದ ಟಿಕೆಟ್ ಮಾರಾಟವಾಗಿದೆ. ಆಫ್‌ಲೈನ್‌ ಮೂಲಕ ₹10 ಲಕ್ಷಕ್ಕೂ ಹೆಚ್ಚು ಮೊತ್ತದ ಟಿಕೆಟ್ ಮಾರಾಟವಾಗಿದ್ದು, ಟಿಕೆಟ್‌ ಮೂಲಕ ಒಂದೇ ದಿನದಲ್ಲಿ ₹17 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ.

‘ನೆರೆ ರಾಷ್ಟ್ರವಾದ ರೊಮೇನಿಯಾ, ಜರ್ಮನಿ, ನೆರೆ ರಾಜ್ಯಗಳ ಚೆನ್ನೈ, ಕೊಚ್ಚಿ, ಉತ್ತರ ಭಾರದ ಜಮ್ಮು-ಕಾಶ್ಮೀರದಿಂದಲೂ ಟಿಕೆಟ್‌ಗಳು ಬುಕಿಂಗ್ ಆಗಿರುವ ಬಗ್ಗೆ ಆ್ಯಪ್‌ನಲ್ಲಿ ಮಾಹಿತಿ ಲಭ್ಯವಾಗಿದೆ’ ಎಂದು ದೇವಸ್ಥಾನ ಆಡಳಿತ ಅಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.

ADVERTISEMENT

ಆನ್‌ಲೈನ್ ಅಪ್ಲಿಕೇಶನ್ ಮೂಲಕ ಮಾರಾಟವಾಗುವ ಬಗ್ಗೆ ಮಾಹಿತಿಯನ್ನು ಲೊಕೇಶನ್ ಮೂಲಕ ಸಂಗ್ರಹಿಸಲಾಗಿದೆ. ಮುಂದಿನ ಎಂಟು ದಿನ ದರ್ಶನ ಲಭ್ಯವಿದ್ದು, ಸಂದರ್ಭದಲ್ಲಿ ಮತ್ತಷ್ಟು ದೇಶ– ವಿದೇಶಗಳಿಂದ ಹಾಗೂ ರಾಜ್ಯಗಳಿಂದ ಲಕ್ಷಾಂತರ ಮೌಲ್ಯದ ಟಿಕೆಟ್ ಬುಕಿಂಗ್ ಆಗುವ ಸಾಧ್ಯತೆಗಳು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯ ಜನರು ಎಲ್ಲಿಯೇ ಇದ್ದರೂ, ಹಾಸನಾಂಬ ದೇವಿಯ ಜಾತ್ರೋತ್ಸವಕ್ಕೆ ಬಂದೇ ಬರುತ್ತಾರೆ. ಹಾಗಾಗಿ ವಿದೇಶದಲ್ಲಿರುವ ಹಾಗೂ ಹೊರರಾಜ್ಯದಲ್ಲಿ ಇರುವ ಜಿಲ್ಲೆಯ ಜನರು ಆ್ಯಪ್‌ ಮೂಲಕ ಮುಂಗಡ ಟಿಕೆಟ್‌ ಕಾದಿರಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ದೇಶ ವಿದೇಶಗಳಿಂದಲೂ ವಿಶೇಷ ದರ್ಶನಕ್ಕೆ ಟಿಕೆಟ್ ಬುಕಿಂಗ್ ಮಾಡಿರುವ ಮಾಹಿತಿ ಲಭ್ಯವಾಗಿದ್ದು ದರ್ಶನಕ್ಕೆ ವಿದೇಶಿಗರು ಆಸಕ್ತಿ ಹೊಂದಿರುವುದು ಸಂತಸದ ವಿಷಯ.
ಮಾರುತಿ ಹಾಸನಾಂಬ ದೇವಸ್ಥಾನ‌ ಆಡಳಿತಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.