ADVERTISEMENT

ಆಲೂರು | ಕೆಪಿಎಸ್‌ ಶಾಲೆಗೆ 75ರ ಸಂಭ್ರಮ

ರಾಯರಕೊಪ್ಪಲಿನಲ್ಲಿ 1949ರಲ್ಲಿ ಆರಂಭ: ಗ್ರಾಮೀಣ ವಿದ್ಯಾರ್ಥಿಗಳ ದೇಗುಲ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 5:10 IST
Last Updated 27 ಅಕ್ಟೋಬರ್ 2024, 5:10 IST
   

ಆಲೂರು: ಹೊಯ್ಸಳ ಸಾಮ್ರಾಜ್ಯದ ನೆಲೆಬೀಡಾದ ಜಿಲ್ಲೆಯ ಸಣ್ಣಕ್ಕಿನಾಡು ಎಂದು ಪ್ರಖ್ಯಾತಿ ಹೊಂದಿರುವ, ಕಾಫಿ ತೋಟಗಳ ಸೆರಗನ್ನು ಹೊದ್ದಿರುವ ಆಲೂರು ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಈಗ ಅಮೃತ ಸಂಭ್ರಮ.

1949 ಆ. 8 ರಂದು ಮೈಸೂರು ಸರ್ಕಾರದ ಅಂದಿನ ಶಿಕ್ಷಣ ಸಚಿವರಾಗಿದ್ದ ಚಂದ್ರಶೇಖರಯ್ಯ ಅವರು ಪ್ರೌಢಶಾಲೆಯನ್ನು ಉದ್ಘಾಟಿಸಿದ್ದರು. 1984 ಜುಲೈ 9 ರಂದು ಸರ್ಕಾರಿ ಪದವಿಪೂರ್ವ ಕಾಲೇಜು, ನಂತರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆಗಿ ಮಾರ್ಪಾಡಾಯಿತು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಅಧಿಕೃತವಾಗಿ ಬದಲಾಗಿ, ಸದ್ಯ ಪೂರ್ವ ಪ್ರಾಥಮಿಕ ಹಂತದಿಂದ ಪದವಿಪೂರ್ವ ಹಂತದವರೆಗೆ ಸುಮಾರು 680 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ಸೂರಿನಡಿ ಶಿಕ್ಷಣ ಪಡೆಯುತ್ತಿದ್ದಾರೆ.

ADVERTISEMENT

ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಹೆಸರುವಾಸಿಯಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು, ಕೆಲವರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಹೊರ
ಹೊಮ್ಮಿದ್ದಾರೆ.

ವಜ್ರ ಮಹೋತ್ಸವ ಸಂದರ್ಭದಲ್ಲಿ ವಿಚಾರ ಸಂಕಿರಣ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಭಾಗವಹಿಸಲಿದ್ದಾರೆ.

ಅ. 27 ರಂದು ಬೆಳಿಗ್ಗೆ 8 ಕ್ಕೆ ಮಗ್ಗೆ ಗ್ರಾಮದಿಂದ ಕೆ.ಪಿ.ಎಸ್. ಶಾಲೆವರೆಗೆ ಜಾಥಾ, 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ, ಸಂಜೆ 4 ಗಂಟೆಗೆ ವಿಚಾರ ಸಂಕಿರಣ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ, ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿಯೊಬ್ಬರೂ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಪ್ರಾಂಶುಪಾಲೆ ಎಚ್.ಬಿ. ಶೀಲಾ, ಮುಖ್ಯ ಶಿಕ್ಷಕ ಮಹದೇವ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಬಿ. ರಾಜಣ್ಣ, ಖಜಾಂಚಿ ಕೆ.ಎಂ. ಕಾಂತರಾಜು, ಹಲಸೂರು ಕಾಂತರಾಜು, ಹಂಜಳಿಗೆ ಮಂಜುನಾಥ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ದಿನೇಶ್ ಮನವಿ ಮಾಡಿದ್ದಾರೆ.

ನಾನು ಶಾಸಕನಾಗಿದ್ದಾಗ ₹2 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದೇನೆ. ಸರ್ಕಾರಿ ಶಾಲೆ ವಜ್ರ ಮಹೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ.
ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ
ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ಶಾಲೆ ಶತಾಯುಷಿ ಆಗಲೆಂದು ಹಾರೈಸುತ್ತೇನೆ.
ಸಿಮೆಂಟ್ ಮಂಜು, ಶಾಸಕ
ನಾನು ಇಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ವಜ್ರ ಮಹೋತ್ಸವ ಆಚರಿಸುತ್ತಿರುವುದು ನನ್ನ ಪುಣ್ಯ. ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇನೆ.
ಎಚ್.ಬಿ. ಶೀಲಾ, ಕೆ.ಪಿ.ಎಸ್. ಶಾಲೆ ಪ್ರಾಂಶುಪಾಲೆ
ನನ್ನ ಎರಡು ಮಕ್ಕಳು ಪ್ರಾಥಮಿಕ ಹಂತದಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದು, ಸದ್ಯ 9 ನೇ ತರಗತಿಯಲ್ಲಿದ್ದಾರೆ. ಶಿಕ್ಷಣ ಉತ್ತಮವಾಗಿದೆ.
ಎಚ್.ಎಂ. ಕುಮಾರ್, ಕಾಗನೂರು ಹೊಸಳ್ಳಿ ಪೋಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.