ಕೊಣನೂರು: ಇಲ್ಲಿನ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಮತ್ತು ಬಿಎಸ್‍ಎಸ್ ಸರ್ಕಾರಿ ಪ್ರೌಢಶಾಲೆಯ ವಜ್ರಮಹೋತ್ಸವಕ್ಕೆ ಅದ್ಧೂರಿ ಸಿದ್ಧತೆಗಳು ನಡೆದಿದ್ದು, ಕಾರ್ಯಕ್ರಮವು ಶನಿವಾರ (ನ.16) ಇಲ್ಲಿನ ಗಣಪತಿ ಪೆಂಡಾಲ್‌ನಲ್ಲಿ ಜರುಗಲಿದೆ.
ಇಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಹಾಗೂ 2010 ರವರೆಗೆ ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಸುಮಾರು 100 ಕ್ಕೂ ಹೆಚ್ಚು ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಉಭಯ ಶಾಲೆಗಳ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದಾರೆ.
ಹಳೆ ವಿದ್ಯಾರ್ಥಿಗಳ ಶ್ರಮದಿಂದಾಗಿ ಸರ್ಕಾರಿ ಶಾಲೆಯೊಂದರಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಿದ್ದು, ಜನರ ಗಮನ ಸೆಳೆದಿದೆ. 2018-19 ನೇ ಸಾಲಿನಿಂದ 25 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಎಲ್‌ಕೆಜಿ, ಯುಕೆಜಿ ಪ್ರಾರಂಭವಾಗಿದ್ದು, 2022-23ನೇ ಸಾಲಿನಲ್ಲಿ 96 ಮತ್ತು 2023-24 ನೇ 84 ಮತ್ತು 2024-25 ರಲ್ಲಿ 80 ಪುಟಾಣಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಶಾಲೆಯ 1 ರಿಂದ 7ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ 349 ಮಕ್ಕಳು ಕಲಿಯುತ್ತಿದ್ದಾರೆ.
ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಶಾಲೆಯಲ್ಲಿನ 2 ಕೊಠಡಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಂದ ತಲಾ ₹6.5 ಸಾವಿರ ಶುಲ್ಕ ಪಡೆದಿದ್ದು, ಬರುವ ಹಣದಲ್ಲಿ ಮಕ್ಕಳಿಗೆ 2 ಜೊತೆ ಸಮವಸ್ತ್ರ ಹೊಲಿಸಿ ಕೊಡಲಾಗುತ್ತಿದೆ. ಟೈ ಬೆಲ್ಟ್ ಮತ್ತು ಅಗತ್ಯವಿರುವ ಪುಸ್ತಕ ನೀಡುತ್ತಿದ್ದಾರೆ. 2 ತರಗತಿಗಳಿಗೂ ಸಹ 2 ಶಿಕ್ಷಕಿಯರನ್ನು ಹಳೆಯ ವಿದ್ಯಾರ್ಥಿಗಳ ವೇದಿಕೆಯವರೇ ನೇಮಿಸಿಕೊಂಡಿದ್ದು ಅವರಿಗೆ ಸಂಬಳವನ್ನೂ ಈ ಹಣದಿಂದಲೇ ನೀಡಲಾಗುತ್ತಿತ್ತು. ಶಾಲೆಯು ಪಿಎಂಶ್ರೀ ಶಾಲಾ ಅನುದಾನಕ್ಕೆ ಆಯ್ಕೆ ಆದಾಗಿನಿಂದ ಎಲ್‍ಕೆಜಿ, ಯುಕೆಜಿ ತರಗತಿಗಳು ಸರ್ಕಾರದ ವತಿಯಿಂದಲೇ ನಡೆಯುತ್ತಿವೆ.
ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತೆ ಗೋಡೆಗಳಲ್ಲಿ ಪ್ರಾಣಿಗಳ ಚಿತ್ರ, ಗೋಡೆ ಬರಹಗಳು, ವಿವಿಧ ರೀತಿಯ ಆಟಿಕೆಗಳು, ಉತ್ತಮ ದರ್ಜೆಯ ಆಸನ, ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. 2 ಕೊಠಡಿಯನ್ನು ಕಲಿಕಾ ಸ್ನೇಹಿಯಾಗಿ ಮಾರ್ಪಡಿಸಲು ಸುಮಾರು ₹12 ಲಕ್ಷ ವೆಚ್ಚ ಮಾಡಿದ್ದು, ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗಿದೆ. ಶಾಲೆಯ ಆವರಣದಲ್ಲಿ ಪುಟ್ಟ ಉದ್ಯಾನ ನಿರ್ಮಿಸಿದ್ದು, ಪ್ರವೇಶ ದ್ವಾರಕ್ಕೆ ಇಂಟರ್ ಲಾಕ್ ಆಳವಡಿಸಲಾಗಿದೆ.
ಇಲ್ಲಿನ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸಿದ ನಂತರ, 1 ರಿಂದ 7 ನೇ ತರಗತಿಗಳಿಗೂ ದಾಖಲಾತಿ ಹೆಚ್ಚುತ್ತಿದ್ದು, ಶಾಲೆಗೆ ಭೇಟಿ ನೀಡಿದ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಶಾಲೆಯಲ್ಲಿ 1 ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸ್ಥಳದಲ್ಲೇ ಒಪ್ಪಿಗೆ ನೀಡಿ ಸರ್ಕಾರದಿಂದ ಅನುಮತಿ ಕೊಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.