ಹಾಸನ: ಪಕ್ಷ ಬಲವರ್ಧನೆ ಹಾಗೂ ಕೇಂದ್ರ ಸರ್ಕಾರ ಯೋಜನೆಗಳ ಪ್ರಚಾರ ಮತ್ತು ಫಲಾನುಭವಿಗಳ ಭೇಟಿ ಮಾಡುವ ಉದ್ದೇಶದಿಂದ ಮೂರು ದಿನಗಳ ಜಿಲ್ಲಾ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಕೃಷ್ಣ ಪಾಲ್ ಗುರ್ಜರ್ ತಿಳಿಸಿದರು.
ನಗರದ ಹಾಸನಾಂಬ ದೇವಾಲಯದ ಆವರಣದಲ್ಲಿ ಇರುವ ಸಿದ್ದೇಶ್ವರ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೊಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪುರಾತನ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಪ್ರವಾಸಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ ಎಂದರು.
ವಿಶ್ವ ಹಾಗೂ ದೇಶದಲ್ಲಿ ಮೋದಿ ಜನಪ್ರಿಯತೆ ಹೆಚ್ಚುತ್ತಿದೆ. 2024 ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಕಟ್ಟಲಾಗುವುದು. ಇದಕ್ಕಾಗಿಯೇ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರನ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶೇಷವಾಗಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳ ಲಾಭ ಎಷ್ಟು ಮಂದಿಗೆ ತಲುಪಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು.
ಫಲಾನುಭವಿಗಳ ಬಳಿ ತೆರಳಿ ಯೋಜನೆಯಿಂದ ಆಗಿರುವ ಪ್ರಯೋಜನದ ಬಗ್ಗೆ ತಿಳಿಯಲಾಗುವುದು. ಈ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಕೆಲಸ ಮಾಡಲಾಗುವುದು ಎಂದರು.
ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಕಾಂತರಾಜು, ಎಚ್.ಎಂ. ವಿಶ್ವನಾಥ್, ನಗರಸಭೆ ಅಧ್ಯಕ್ಷ ಮೋಹನ್, ಬಜಿಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.