ADVERTISEMENT

ಹಾಸನ | ರೈತರ ಸಮಸ್ಯೆಗೆ ಸ್ಪಂದಿಸದ ಕೇಂದ್ರ: ಆರೋಪ

ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 13:55 IST
Last Updated 26 ನವೆಂಬರ್ 2024, 13:55 IST
ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.   

ಹಾಸನ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇದುವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಮಾತನಾಡಿ, ಹಲವಾರು ಹೋರಾಟದ ನಂತರವೂ ಕೇಂದ್ರ ಸರ್ಕಾರ ರೈತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಹಿಂದೆ ದೇಶದ ವಿವಿಧ ರೈತ ಸಂಘಟನೆಗಳಿಂದ ದೆಹಲಿಯಲ್ಲಿ ನಡೆದ ಅನಿರ್ದಿಷ್ಟಾವಧಿ ಹೋರಾಟದ ವೇಳೆ, ಕೇಂದ್ರ ಸರ್ಕಾರ ರೈತರ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಈವರೆಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ರೈತರ ಹಿತ ಕಾಯಬೇಕಾಗಿರುವ ಸರ್ಕಾರ, ರೈತ ವಿರೋಧಿ ಮಸೂದೆ ಜಾರಿಗೆ ತರುವ ಮೂಲಕ ಜೀತದ ಆಳುಗಳನ್ನಾಗಿ ಮಾಡಿದೆ. ಕೂಡಲೇ ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆದು, ರೈತರ ಪರ ಕಾನೂನು ಹಾಗೂ ಮಸೂದೆಗಳನ್ನು ಜಾರಿಗೆ ತರಬೇಕು ಎಂಬ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ರೈತರು ಬೆಳೆಯುವ ಬೆಳೆಗಳಿಗೆ ಕಾನೂನುಬದ್ಧವಾಗಿ ಬೆಂಬಲ ಬೆಲೆ ಖಾತರಿ ಪಡಿಸಬೇಕು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ, ಎಲ್ಲ ರೀತಿಯ ಕಾರ್ಮಿಕ ಗುತ್ತಿಗೆ ಅಥವಾ ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಕನಿಷ್ಠ ₹10ಸಾವಿರ ಪಿಂಚಣಿ ನಿಗದಿ ಮಾಡಬೇಕು. ತಿಂಗಳಿಗೆ ಕನಿಷ್ಠ ವೇತನ ₹26ಸಾವಿರ ನಿಗದಿ ಮಾಡಬೇಕು. ಕೃಷಿ, ಕಾರ್ಮಿಕ, ಸಂಘಟಿತ, ಅಸಂಘಟಿತ ಎಲ್ಲ ವರ್ಗದ ಕಾರ್ಮಿಕರಿಗೆ ಅನ್ವಯಿಸುವಂತೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮಾತನಾಡಿ, ಸಾಲಬಾಧೆ ಮತ್ತು ಆತ್ಮಹತ್ಯೆಗಳನ್ನು ಕೊನೆಗೊಳಿಸಲು ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಸಮಗ್ರ ಸಾಲಮನ್ನಾ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ಮಾಡಬಾರದು. ಪಡಿತರ ವ್ಯವಸ್ಥೆ ಬಲಪಡಿಸಬೇಕು. ಎಲ್ಲರಿಗೂ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಮಾಜದಲ್ಲಿ ಕೋಮು ವಿಭಜನೆ ನಿಲ್ಲಿಸಲು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಮಹಿಳಾ ಸಬಲೀಕರಣ ಮತ್ತು ತ್ವರಿತ ನ್ಯಾಯಾಂಗ ವ್ಯವಸ್ಥೆ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೊನೆಗೊಳಿಸಬೇಕು. ಜಾತಿ ಹಾಗೂ ಕೋಮು ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ, ಅರವಿಂದ್, ಎಚ್.ಎಸ್. ಮಂಜುನಾಥ್, ರಾಜ್ಯ ರೈತ ಸಂಘದ ವಾಜಿದ್, ರವಿ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಜಿ.ಪೃಥ್ವಿ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ವಿ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.