ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ಡಿಕೆಶಿ ಸ್ಪರ್ಧೆ ಕುರಿತು ಹೈಕಮಾಂಡ್ ತೀರ್ಮಾನ: ರಾಜಣ್ಣ

ಗಂಭೀರ ಪರಿಗಣನೆ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 14:02 IST
Last Updated 4 ಸೆಪ್ಟೆಂಬರ್ 2024, 14:02 IST
ಕೆ.ಎನ್. ರಾಜಣ್ಣ
ಕೆ.ಎನ್. ರಾಜಣ್ಣ   

ಹಾಸನ: ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಯಾರೇ ನಿಂತರೂ ಗೆಲ್ಲಿಸಲು ಎಲ್ಲಾ  ಮುಖಂಡರು ಪ್ರಯತ್ನಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉಪಚುನಾವಣೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪರ್ಧಿಸುವ ಕುರಿತು ಹೈಕಮಾಂಡ್ ತೀರ್ಮಾನಿಸಲಿದೆ. ಅವರಿಗೆ ಅವಕಾಶ ಕೊಡಬಹುದು. ಇನ್ನೊಬ್ಬರು ಅಪೇಕ್ಷಿಸಿದರೆ, ಅವರಿಗೂ ಕೊಡಬಹುದು’ ಎಂದರು.

‘ಸದ್ಯದಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂದು ನಾನು ಅಂದುಕೊಂಡಿಲ್ಲ. ಯಾವತ್ತಾದರೂ ಒಂದು ದಿನ ಬದಲಾವಣೆಯಾಗಬೇಕು. ಆಗುತ್ತೆ’ ಎಂದರು.

ADVERTISEMENT

‘ಮೀರ್ ಸಾದಿಕ್, ಮಲ್ಲಪ್ಪ ಶೆಟ್ಟಿಯಂಥವರು ನಮ್ಮಲ್ಲಿದ್ದಾರೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಂಗೊಳ್ಳಿ ರಾಯಣ್ಣನ ಕಲ್ಪನೆಯಿಟ್ಟುಕೊಂಡು ಅವರು ಹೇಳಿದ್ದಾರೆ. ರಾಜಕೀಯ ಸನ್ನಿವೇಶಕ್ಕೆ ಅದನ್ನು ಹೋಲಿಕೆ ಮಾಡಲು ಹೋಗಬೇಡಿ’ ಎಂದರು.

ಮುಡಾ ಹಿಂದಿನ ಆಯುಕ್ತರ ಅಮಾನತಿನ ಕುರಿತು ಪ್ರತಿಕ್ರಿಯಿಸಿ, ‘ತಪ್ಪು ಮಾಡಿದ್ದಾನೆ, ಶಿಕ್ಷೆಯಾಗುತ್ತದೆ. ಅಧಿಕಾರಿ ಮೇಲೆ ಪ್ರಭಾವ ಬೀರಿ ಮುಖ್ಯಮಂತ್ರಿಯು ನಿವೇಶನ ಪಡೆದಿದ್ದರೆ ಹೇಗೆ ಅಮಾನತು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.

‘ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರ ಮೇಲೆ ಪ್ರಭಾವ ಬೀರಿ ಈ ರೀತಿ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ. ನ್ಯಾಯ ಸಿಗುತ್ತದೆ ಎಂದು ನಂಬಿದ್ದೇವೆ’ ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿ ಕುರ್ಚಿ ಖಾಲಿ ಇದೆಯಾ? ಇದ್ದರೆ ಕೇಳಬೇಕು. ದೇಶಪಾಂಡೆ ಅವರೊಬ್ಬರೇ ಅಲ್ಲ, ಅವರಂತೆ ಆಕಾಂಕ್ಷಿಗಳ ಒಂದು ಪಟ್ಟಿಯೇ ಇದೆ. ಹೈಕಮಾಂಡ್ ಒಪ್ಪಿದರೆ ಮುಖ್ಯಮಂತ್ರಿಯಾಗಲು ಸಾಧ್ಯ. ಸಿದ್ದರಾಮಯ್ಯ ಒಪ್ಪಿದರೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.