ADVERTISEMENT

585 ಎಕರೆ ಭೂಸ್ವಾಧೀನ: ಶೀಘ್ರ ಹಸ್ತಾಂತರ

ಚಿಕ್ಕಮಗಳೂರು–ಬೇಲೂರು ರೈಲು ಮಾರ್ಗ 3 ವರ್ಷದಲ್ಲಿ ಪೂರ್ಣ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 14:03 IST
Last Updated 28 ಅಕ್ಟೋಬರ್ 2024, 14:03 IST
ಕೇಂದ್ರ ಸಚಿವ ವಿ. ಸೋಮಣ್ಣ, ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದರು.
ಕೇಂದ್ರ ಸಚಿವ ವಿ. ಸೋಮಣ್ಣ, ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದರು.   

ಹಾಸನ: ಚಿಕ್ಕಮಗಳೂರು-ಬೇಲೂರು-ಆಲೂರು ರೈಲ್ವೆ ಯೋಜನೆ ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ಚಿಕ್ಕಮಗಳೂರು-ಬೇಲೂರು-ಆಲೂರು ರೈಲು ಮಾರ್ಗಕ್ಕೆ 585 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಭೂಸ್ವಾಧೀನ ಮಾಡಿದ್ದಾರೆ. ತಕ್ಷಣದಲ್ಲೇ ನಮಗೆ ಹಸ್ತಾಂತರ ಮಾಡಲಿದ್ದು, ಮೂರು ವರ್ಷದಲ್ಲಿ ಈ ಯೋಜನೆ ಮುಗಿಯಲಿದೆ ಎಂದು ತಿಳಿಸಿದರು.

ನಾನು ಸಚಿವನಾದ ಮೇಲೆ ಕರ್ನಾಟಕ ರಾಜ್ಯದಲ್ಲಿ 11 ಯೋಜನೆಗಳು, 1,800 ಹೊಸಲೈನ್‌ಗಳನ್ನು ಹಾಕಲು ಚಾಲನೆ ಕೊಟ್ಟಿದ್ದೇವೆ. ಈಗಾಗಲೇ ತುಮಕೂರು, ರಾಯದುರ್ಗ, ದಾವಣಗೆರೆ, ಗದಗ ಹತ್ತು ಹಲವಾರು ಕಡೆ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ₹43 ಸಾವಿರ ಕೋಟಿ ರೂಪಾಯಿಗಳ‌ ನಾನಾ ರೈಲ್ವೆ ಯೋಜನೆ ಕೈಗೆತ್ತುಕೊಂಡಿದ್ದೇವೆ ಎಂದು ಹೇಳಿದರು.

ADVERTISEMENT

44 ಸಾವಿರ ಡಬಲ್ ಲೈನ್‌ ರೈಲು ಮಾರ್ಗ, ಶೇ 98 ರಷ್ಟು ಎಲೆಕ್ಟ್ರಿಕೇಷನ್ ನೊಂದಿಗೆ ಹೊಸಲೈನ್‌ಗಳನ್ನ ತ್ವರಿತಗತಿಯಲ್ಲಿ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ. 104 ವಂದೇಭಾರತ್ ರೈಲುಗಳು ಇಡೀ ದೇಶದ 24 ರಾಜ್ಯಗಳಲ್ಲಿ 294 ಜಿಲ್ಲಾ ಕೇಂದ್ರಗಳಲ್ಲಿ ಸುತ್ತಾಡುತ್ತಿವೆ. ಕರ್ನಾಟಕ ರಾಜ್ಯದಲ್ಲೆ 10 ರೈಲುಗಳು ಓಡಾಡುತ್ತಿವೆ ಎಂದರು ತಿಳಿಸಿದರು.

ಹೊಸದಾಗಿ 30 ಸಾವಿರ ಹೊಸ ಬೋಗಿಗಳನ್ನು ಅಳವಡಿಕೆ ಪ್ರಾರಂಭವಾಗಿದ್ದು, ಒಂದೊಂದು ಪ್ಯಾಸೆಂಜರ್ ರೈಲುಗಳಿಗೆ ಮೂರು, ನಾಲ್ಕು ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎಂದರು.

ತುಮಕೂರಿನಿಂದ ಬೆಂಗಳೂರಿಗೆ ಹೊಸದಾಗಿ ಮೆಮೊ ರೈಲು ಮಾಡಿದ್ದೇವೆ. ಅದೇ ರೈಲು ಹಾಸನದಿಂದ ಬೆಂಗಳೂರಿಗೆ ಸಂಚರಿಸಲು ಕೇಂದ್ರದ ಶೇ 60 ದರಲ್ಲಿ ಓಡಾಡಲು ವ್ಯವಸ್ಥೆ ಮಾಡಲು ಚಿಂತನೆ ಮಾಡುತ್ತಿದ್ದೇವೆ ಎಂದರು.

ಭಾರತದಲ್ಲಿ ರೈಲ್ವೆ ಇಲಾಖೆ ಇಡೀ ವಿಶ್ವದ ಭೂಪಟದಲ್ಲಿ ಐದನೇ ಸ್ಥಾನದಲ್ಲಿತ್ತು. ಅದನ್ನು ಮೂರನೇ ಸ್ಥಾನಕ್ಕೆ ತರಲು ತೀರ್ಮಾನ ಆಗಿದೆ. ನ.1ಮತ್ತು 2 ರಂದು ಪ್ರಧಾನಮಂತ್ರಿಗಳು ಇಲಾಖೆ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಪತ್ರಕರ್ತರಿಗೆ, ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರೈಲ್ವೆ ಪಾಸ್ ನಿಂತಿದೆ. ಶ್ರೀಮಂತರು ಇದರ ಲಾಭ ಪಡೆಯತ್ತಿದ್ದರು. ಅರ್ಹರಿಗೆ ಮಾತ್ರ ಪಾಸ್‌ನ ಸೌಲಭ್ಯ ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ. ಆದ್ದರಿಂದ ಮತ್ತೆ ರೈಲ್ವೆ ಪಾಸ್‌ನ ಅವಕಾಶ ಕೊಡಲು ನನ್ನದೂ ಒತ್ತಾಯವಿದೆ. ಪ್ರಧಾನಮಂತ್ರಿ ಅವರು ಆ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ– ರಾಜ್ಯ ಸರ್ಕಾರಗಳು ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಬೇಕು ಎಂಬುದು ಪ್ರಧಾನಿ ಅವರ ಚಿಂತನೆ. ಕೇಂದ್ರ ಸರ್ಕಾರ ಯಾವುದೇ ರಾಜ್ಯದ ಸರ್ಕಾರದ ಜೊತೆ ಸಂಘರ್ಷ ಮಾಡಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ನಾನು ನ.2 ರಿಂದ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಹಾಸನ ನಗರದ ಚನ್ನಪಟ್ಟಣ ನೂತನ ಬಸ್‌ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಶಾಸಕ ಎಚ್‌.ಡಿ. ರೇವಣ್ಣ, ಸಂಸದ ಶ್ರೇಯಸ್ ಪಟೇಲ್ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಇಲಾಖೆಯಿಂದಲೇ ಶೀಘ್ರವಾಗಿ ಕಾಮಗಾರಿ ಪೂರ್ಣ ಮಾಡಲಾಗುವುದು ಎಂದರು.

ಶಾಸಕರಾದ ಎಚ್.ಕೆ.ಸುರೇಶ್, ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.