ADVERTISEMENT

ಹಾಸನ | ಮಾಲೀಕರಿಗೆ ದಂಡ: ಬಾಲಕರ ಹೆಸರಿನಲ್ಲಿ ಠೇವಣಿ

ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಮಕ್ಕಳು: ಶಿಕ್ಷಣ ಕೊಡಿಸಲು ತೋಟದ ಮಾಲೀಕರಿಗೆ ಸೂಚನೆ

ಚಿದಂಬರಪ್ರಸಾದ್
Published 18 ಜುಲೈ 2024, 7:10 IST
Last Updated 18 ಜುಲೈ 2024, 7:10 IST

ಹಾಸನ: ಬಾಲಕಾರ್ಮಿಕರಾಗಿದ್ದವರನ್ನು ರಕ್ಷಿಸಿದ ಬಳಿಕ ಕಾರ್ಮಿಕ ಇಲಾಖೆಯು ಅವರ ಹೆಸರಿನಲ್ಲಿ ಹಣ ಠೇವಣಿ ಇಟ್ಟು ಭವಿಷ್ಯಕ್ಕೆ ಬುನಾದಿ ಹಾಕುತ್ತಿದೆ. ಜಿಲ್ಲೆಯ ಸಕಲೇಶಪುರದಲ್ಲಿ ಈಚೆಗೆ ರಕ್ಷಿಸಿದ ಮೂವರ ಹೆಸರಿನಲ್ಲಿ ತಲಾ ₹35 ಸಾವಿರ ಠೇವಣಿ ಇಡಲಾಗಿದೆ.

ಇತ್ತೀಚೆಗೆ ಸಕಲೇಶಪುರ ತಾಲ್ಲೂಕಿನ ಕಾಫಿ ಎಸ್ಟೇಟ್ ಹಾಗೂ ಮಟನ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದವರನ್ನು ರಕ್ಷಿಸಿದ್ದು, ಇಬ್ಬರು ಮಾಲೀಕರಿಗೆ ತಲಾ ₹ 20ಸಾವಿರ ಹಾಗೂ ಮಟನ್ ಸ್ಟಾಲ್ ಮಾಲೀಕರಿಗೆ ₹ 20ಸಾವಿರ ಸೇರಿದಂತೆ ಒಟ್ಟು ₹ 60ಸಾವಿರ ದಂಡವನ್ನು ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ವಿಧಿಸಿತ್ತು.

‘ಅದರ ಜೊತೆಗೆ, ಸರ್ಕಾರದ ಪುನರ್ವಸತಿ ನಿಧಿಯಿಂದ ₹ 15 ಸಾವಿರ ಪಡೆದು, ಮೂವರು ಮಕ್ಕಳ ಹೆಸರಿನಲ್ಲಿ ತಲಾ ₹35ಸಾವಿರವನ್ನು ಕೆನರಾ ಬ್ಯಾಂಕ್ ಹಾಸನ ಶಾಖೆಯಲ್ಲಿ ಠೇವಣಿ ಇಡಲಾಗಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಬಾಲಕಾರ್ಮಿಕರನ್ನು ಕಾಫಿ ತೋಟಗಳಲ್ಲಿ, ವರ್ಕಶಾಪ್‌, ಮಟನ್ ಸ್ಟಾಲ್, ಕೈಗಾರಿಕಾ ಪ್ರದೇಶ, ಸಾ ಮಿಲ್, ವುಡ್ ಇಂಡಸ್ಟ್ರೀಸ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಪತ್ತೆ ಹಚ್ಚಲಾಗಿದೆ. ಮೂವರು ಬಾಲಕರನ್ನು ಸ್ಥಳೀಯ ನಾರ್ವೆ ಜೆಎಸ್ಎಸ್ ಶಾಲೆಯ 8ನೇ ತರಗತಿಗೆ ದಾಖಲಿಸಲಾಗಿದೆ. ಮತ್ತೊಬ್ಬ ಬಾಲಕಿಯನ್ನು ಅಸ್ಸಾಂನ ಶಾಲೆಗೆ ದಾಖಲಿಸಲು ಪೋಷಕರಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕಾಫಿ ತೋಟಗಳಿಗೆ 5–6 ತಿಂಗಳ ಅವಧಿಗೆ ಕೂಲಿಕಾರ್ಮಿಕರಾಗಿ ಬರುವ ನೆರೆ ರಾಜ್ಯ ಹಾಗೂ ಜಿಲ್ಲೆಯ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಬೆಳೆಗಾರರ ಸಂಘದವರಿಗೆ ಇಲಾಖೆಯಿಂದ ಶಿಬಿರ ನಡೆಸಿ ಸೂಚಿಸಲಾಗಿದೆ. ತೋಟದ ಮಾಲೀಕರು ಎಚ್ಚರಿಕೆ ವಹಿಸುತ್ತಿಲ್ಲ. ಹೀಗಾಗಿ ಸಕಲೇಶಪುರ ತಾಲ್ಲೂಕಿನಲ್ಲಿ ಬಾಲಕಾರ್ಮಿಕರು ಪತ್ತೆಯಾಗುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.