ಶ್ರವಣಬೆಳಗೊಳ: ಉತ್ತರ ಭಾರತದಲ್ಲಿ ಇಲ್ಲಿಯ ಎಳನೀರಿಗೆ ಹೆಚ್ಚಿನ ಬೇಡಿಕೆ ಇದ್ದು, ಅಲ್ಲಿಗೆ ಸರಬರಾಜು ಮಾಡಲು ಹೋಬಳಿಯ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಂದ ಮಧ್ಯವರ್ತಿಗಳು ಎಳನೀರು ಖರೀದಿಸುತ್ತಿದ್ದಾರೆ.
ಶ್ರವಣಬೆಳಗೊಳ ವ್ಯಾಪ್ತಿಯಲ್ಲಿ ರೈತರಿಂದ ಎಳನೀರು ಖರೀದಿಸಿ, ಬೇಡಿಕೆ ಇರುವ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. ಇಲ್ಲಿನ ಆರ್‌ಎಂಸಿ ಯಾರ್ಡ್, ಸಂತೆ ಮೈದಾನ, ರೈಲ್ವೆ ನಿಲ್ದಾಣ, ಕೊತ್ತನಘಟ್ಟ, ಚಿಕ್ಕಬಿಳ್ತಿ, ಹಿರೇಬಿಳ್ತಿ, ಕಬ್ಬಾಳು, ಹಳೆ ಬೆಳಗೊಳ, ಮಾರುತಿ ಸರ್ಕಲ್‌ನಲ್ಲಿ ಎಳನೀರು ಕಾಯಿಗಳನ್ನು ಸಂಗ್ರಹಿಸಲಾಗುತ್ತಿದೆ. ನಂತರ ಲಾರಿಗಳ ಮೂಲಕ ಅಗತ್ಯ ಇರುವೆಡೆಗೆ ಪೂರೈಕೆ ಮಾಡಲಾಗುತ್ತಿದೆ.
ತೆಂಗಿನ ತೋಟಗಳಿಂದಲೇ ನೇರವಾಗಿ ತಾಜಾ ಎಳನೀರನ್ನು ಖರೀದಿಸುವವರಿಗೆ ಒಂದು ಎಳನೀರಿಗೆ ₹ 25ರಿಂದ ₹ 28ರವರೆಗೆ ರೈತರು ದರ ನಿಗದಿ ಮಾಡಿದ್ದಾರೆ. ರೈತರು ತಾವೇ ಎಳನೀರು ಕಾಯಿಗಳನ್ನು ಕಿತ್ತು, ಮಧ್ಯವರ್ತಿಗಳು ಗುರುತಿಸಿರುವ ಕೇಂದ್ರಗಳಿಗೆ ತಮ್ಮ ವಾಹನದಲ್ಲೇ ಸರಬರಾಜು ಮಾಡಿದರೆ ಪ್ರತಿ ಕಾಯಿಗೆ ₹ 30 ರಿಂದ ₹ 32 ರವರೆಗೆ ಬೆಲೆ ಸಿಗುತ್ತದೆ ಎನ್ನುತ್ತಾರೆ ಹಾಲುಮತಿ ಘಟ್ಟದ ರೈತರುಗಳಾದ ಹಿಮೇಶ್, ನಾಗರಾಜು, ಎಚ್.ಎಂ.ಶಿವಣ್ಣ.
ಒಂದು ವೇಳೆ ತಾಪಮಾನ ಹೆಚ್ಚಿದ್ದರೆ, ಹೆಚ್ಚಿನ ದರ ನಿಗದಿಯಾಗುತ್ತದೆ. ತಾಪಮಾನ ಕಡಿಮೆ ಇದ್ದು, ಮಳೆಗಾಲದಲ್ಲಿ ದರ ಕಡಿಮೆಯಾಗಬಹುದು ಎನ್ನುತ್ತಾರೆ ರೈತರು.
ಈ ಭಾಗದ ಎಳನೀರಿಗೆ ದೆಹಲಿ, ಪಂಜಾಬ್, ಜಮ್ಮು– ಕಾಶ್ಮೀರ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಮುಂಬೈ, ತಮಿಳುನಾಡಿನಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೀಸೆ ಮಂಜೇಗೌಡ ಹೇಳುತ್ತಾರೆ.
ತೆಂಗಿನ ಕಾಯಿ ಮತ್ತು ಒಣ ಕೊಬ್ಬರಿ ಮಾಡುವುದಕ್ಕೆ ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತದೆ. ಹಾಗೆಯೇ ಸಿಪ್ಪೆ ಕಾಯಿಯಿಂದ ಕಾಯಿಯನ್ನು ಬೇರ್ಪಡಿಸುವುದಕ್ಕೆ ಮತ್ತು ಒಣ ಕೊಬ್ಬರಿ ಮಾಡುವುದಕ್ಕೆ ಸಾಗಾಟದ ಹೆಚ್ಚುವರಿ ಕೂಲಿಯ ಖರ್ಚುಗಳು ಬರುತ್ತವೆ ಎನ್ನುತ್ತಾರೆ ರೈತರು.
ಯಾವುದೇ ತರಹದ ಖರ್ಚುಗಳಿಲ್ಲದೇ ಎಳನೀರು ಕಾಯಿ ಮಾರಾಟದಿಂದ ಸುಲಭದಲ್ಲಿ ಲಾಭ ಸಿಗುತ್ತದೆ. 1ಸಾವಿರ ತೆಂಗಿನಕಾಯಿ ಮಾರಾಟ ಮಾಡಿದರೆ, ಕಾಯಿಗೆ ಸರಾಸರಿ ₹ 16 ರಿಂದ ₹ 17 ಬೆಲೆ ಸಿಗುತ್ತದೆ. ಅದೇ 10 ತಿಂಗಳು ಕಾದು ಕೊಬ್ಬರಿ ಮಾಡಿ ಸರ್ಕಾರದ ಬೆಂಬಲ ಬೆಲೆಯೊಂದಿಗೆ ಒಂದು ಕ್ವಿಂಟಲ್‌ಗೆ ಸರಾಸರಿ ₹ 12 ಸಾವಿರ ಬೆಲೆ ಸಿಗುವುದು. ಒಂದು ವೇಳೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ, ರೈತರ ಗೋಳು ಹೇಳತೀರದು. ತೆಂಗಿನ ಕಾಯಿ, ಒಣ ಕೊಬ್ಬರಿಗೆ ಹೆಚ್ಚಿನ ಅವಧಿ ಹಿಡಿಯುವುದು ಒಂದೆಡೆಯಾದರೆ, ಕಾರ್ಮಿಕ ಸಮಸ್ಯೆ ಉಂಟಾಗಿ ಮಾರಾಟದ ಸಂದರ್ಭದಲ್ಲಿ ಇಷ್ಟೇ ಬೆಲೆ ಸಿಗುತ್ತದೆ ಎಂದು ಹೇಳಲಾಗದು ಎಂದು ರೈತ ಸಂಘದ ಹೋಬಳಿ ಅಧ್ಯಕ್ಷ ದಡಿಘಟ್ಟದ ಮಂಜೇಗೌಡ ಅಭಿಪ್ರಾಯ ಪಡುತ್ತಾರೆ.
ಇಲ್ಲಿಯ ವ್ಯಾಪಾರಿಗಳಾದ ಶ್ರೀನಿವಾಸ್, ಮಂಜಣ್ಣ, ಬಸಣ್ಣ ಇದುವರೆಗೂ ಕೆಲವೇ ರಾಜ್ಯಗಳಿಗೆ ಎಳನೀರನ್ನು ಪೂರೈಸುತ್ತಿದ್ದರು. ಇದೀಗ ವ್ಯಾಪಾರದ ಮರ್ಮ ಅರಿತ ಯುವಕರೂ ಎಳನೀರು ವ್ಯಾಪಾರಕ್ಕೆ ನುಗ್ಗಿದ್ದರಿಂದ ಪೈಪೋಟ ಏರ್ಪಟ್ಟಿದೆ.
8 ವರ್ಷದಿಂದ 15 ವರ್ಷದ ಆಯಸ್ಸಿನ ಮರಗಳಿಂದ ಹೆಚ್ಚು ಎಳನೀರು ಕಿತ್ತು ಮಾರಬಹುದು. ಆದರೆ ಮರ ದೊಡ್ಡದಾಗುತ್ತಾ ಹೋದಂತೆ ಎಳನೀರು ಕಾಯಿಯನ್ನು ಕಿತ್ತರೆ, ಮುಂದಿನ ಫಲದ ಹೊಂಬಾಳೆಗೆ ಇಳುವರಿಗೆ ತೊಂದರೆ ಉಂಟಾಗಲಿದ್ದು, ಮರದ ಆಯಸ್ಸು ಸಹ ಕಡಿಮೆ ಆಗುತ್ತದೆ ಎಂದು ಚಲ್ಯಾದ ರೈತ ಮೂರ್ತಿ ಅಭಿಪ್ರಾಯ ಪಡುತ್ತಾರೆ.
ಎಳನೀರು ಕೊಬ್ಬರಿ ಯಾವುದರಲ್ಲಿ ಲಾಭ?
₹ 25 ರಂತೆ ಒಂದು ಸಾವಿರ ತೆಂಗಿನ ಕಾಯಿಗೆ ₹ 25 ಸಾವಿರ ಸಿಗುತ್ತದೆ. ಕನಿಷ್ಠ ₹ 17 ದರ ಸಿಕ್ಕರೂ ಒಂದು ಸಾವಿರ ಕಾಯಿಗೆ ₹ 17ಸಾವಿರ ಸಿಗುತ್ತದೆ. ಅದೇ ಒಂದು ಸಾವಿರ ಕಾಯಿಯನ್ನು ಕೊಬ್ಬರಿ ಮಾಡಿದರೆ ಸರಾಸರಿ 150 ಕೆ.ಜಿ. ಬರುತ್ತದೆ. ಒಣ ಕೊಬ್ಬರಿಗೆ 10 ತಿಂಗಳು ಕಾದು ಒಂದೂವರೆ ಕ್ವಿಂಟಲ್‌ಗೆ ₹18ಸಾವಿರದಿಂದ ₹ 20 ಸಾವಿರ ಸಿಗುತ್ತದೆ. ಒಟ್ಟಾರೆಯಾಗಿ ಕಾಯಿ ಕೊಬ್ಬರಿಗಿಂತ ಎಳನೀರು ಮಾರಾಟ ಮಾಡಿದರೆ ಅಧಿಕ ಲಾಭ ಎಂದು ರೈತ ಹಿಮೇಶ್ ಹೇಳುತ್ತಾರೆ. ಎಳನೀರು ತೆಂಗಿನಕಾಯಿಯನ್ನು ಅವಸರದಲ್ಲಿ ಕಿತ್ತು ರೈತರು ಮಾರಾಟ ಮಾಡುತ್ತಾರೆ. ಅದೇ ಕಾಯಿಯನ್ನು ಕೊಬ್ಬರಿ ಮಾಡಿ ಮಾರುವುದರಿಂದ ತೆಂಗಿನ ಕಾಯಿ ಮತ್ತು ಎಳನೀರಿಗಿಂತಲೂ ಕೊಬ್ಬರಿಯಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಕೊಬ್ಬರಿಯಿಂದ ಬರುವ ಕರಟವನ್ನು ಇದ್ದಿಲು ಮಾಡಲು ತೆಂಗಿನಕಾಯಿಯ ಕಾಯಿ ಮೊಟ್ಟೆಯನ್ನು ನಾರಿನ ಉದ್ಯಮಕ್ಕೆ ಬಳಸುತ್ತಾರೆ. ಈ ಎರಡರಿಂದಲೂ ಲಾಭ ಗಳಿಸಬಹುದು ಎನ್ನುತ್ತಾರೆ ಬೆಕ್ಕದ ರಾಘವೇಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.