ನುಗ್ಗೇಹಳ್ಳಿ: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕೊಬ್ಬರಿ ಬೆಳೆಗಾರರಿಂದ ಉಂಡೆ ಕೊಬ್ಬರಿ ಖರೀದಿ ದಿನಾಂಕವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಜೂನ್ 29ರ ವರೆಗೆ ವಿಸ್ತರಣೆ ಮಾಡಿದೆ ಎಂದು ಹೋಬಳಿ ಕೊಬ್ಬರಿ ಖರೀದಿ ಕೇಂದ್ರದ ಅಧಿಕಾರಿ ಯಶವಂತ್ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಜೂನ್ 14ಕ್ಕೆ ಕೊಬ್ಬರಿ ಖರೀದಿ ಅಂತ್ಯಗೊಳ್ಳಬೇಕಾಗಿತ್ತು. ಈ ಬಗ್ಗೆ ಆದೇಶವನ್ನು ಕೂಡ ಮಹಾಮಂಡಲದ ವತಿಯಿಂದ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ ಈಗಾಗಲೇ ನೋಂದಣಿ ಮಾಡಿರುವ ಕೊಬ್ಬರಿ ಬೆಳೆಗಾರರ ಒತ್ತಾಯದ ದಿನಾಂಕ ವಿಸ್ತರಣೆ ಮಾಡಿದ್ದು, ಇದರಿಂದ ರೈತರಿಗೆ ಇನ್ನು 15 ದಿನಗಳ ಹೆಚ್ಚಿನ ಕಾಲಾವಕಾಶ ಸಿಗಲಿದೆ ಎಂದರು.
ಹೋಬಳಿ ಖರೀದಿ ಕೇಂದ್ರದಲ್ಲಿ ಸುಮಾರು 1,036 ರೈತರು ಕೊಬ್ಬರಿ ಬಿಡಲು ನೋಂದಣಿ ಮಾಡಿಸಿದ್ದರು. ಈ ಪೈಕಿ ಈಗಾಗಲೇ 1,020 ರೈತರು 12 ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ್ದು, ಇನ್ನುಳಿದ 15 ರೈತರಿಂದ 115 ಟನ್ ಕೊಬ್ಬರಿ ಖರೀದಿಸಬೇಕಾಗಿದೆ ಉಳಿದಿರುವ ರೈತರಿಗೆ ಜೂನ್ 17ರಂದು ಕೊಬ್ಬರಿ ಖರೀದಿಸಲು ಟೋಕನ್ ನೀಡಲಾಗಿದೆ. ಈಗಾಗಲೇ ರೈತರಿಂದ ಖರೀದಿಸಿರುವ ಕೊಬ್ಬರಿಗೆ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ ಎಂದರು.
ತಾರತಮ್ಯ ಆರೋಪ: ಕೊಬ್ಬರಿ ಮಾರಾಟ ಮಾಡಿರುವ ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಪ್ರತಿ ಕ್ವಿಂಟಲ್ ಗೆ ₹12 ಸಾವಿರ ರೈತರ ಬ್ಯಾಂಕ್ ಖಾತೆಗಳಿಗೆ ಜಮಯಾಗಿದ್ದು, ರಾಜ್ಯ ಸರ್ಕಾರದ ₹1500 ಹಣ ಜಮೆಯಾಗಿಲ್ಲ. ಆದರೆ ಪಕ್ಕದ ತುಮಕೂರು ಜಿಲ್ಲೆಯ ರೈತರಿಗೆ ಹಣ ಬಿಡುಗಡೆಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸಹಾಯಧನದ ವಿಚಾರದಲ್ಲಿ ಹಾಸನ ಜಿಲ್ಲೆಯನ್ನು ಕಡೆಗಣಿಸುತ್ತಿದೆ ಎಂದು ಡಿಎಸ್ಎಸ್ ಮುಖಂಡ ವಿರುಪಾಕ್ಷಪುರ ಗ್ರಾಮದ ವಿಆರ್ ಪ್ರಕಾಶ್ ಆರೋಪಿಸಿದರು.
ಸರ್ಕಾರ ಹಾಗೂ ರಾಜ್ಯ ಮಾರಾಟ ಮಹಾಮಂಡಲ ಎಚ್ಚೆತ್ತುಕೊಂಡು ರೈತರ ಬ್ಯಾಂಕ್ ಖಾತೆಗಳಿಗೆ ಸಹಾಯಧನದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.