ಸಕಲೇಶಪುರ: ಒಂದು ತಿಂಗಳಿಂದ ಸೂರ್ಯನ ಬಿಸಿಲು ಬೀಳದಂತೆ ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲೆನಾಡು ಭಾಗ ಸಂಪೂರ್ಣ ತೇವಗೊಂಡಿದ್ದು, ಕಾಫಿ, ಕಾಳುಮೆಣಸು, ಶುಂಠಿ ಸೇರಿದಂತೆ ಎಲ್ಲ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿವೆ.
ಮಳೆಗಾಲದ 6 ತಿಂಗಳು ಬೀಳಬೇಕಾದ ವಾಡಿಕೆ ಮಳೆ ಕೇವಲ 25 ದಿನಗಳಲ್ಲಿ ಬಿದ್ದಿದೆ. ಫೆಬ್ರುವರಿಯಿಂದ ಮೇವರೆಗೆ ಈ ವರ್ಷ ಕಾಫಿ ನಾಡಿನಲ್ಲಿಯೇ ಉಷ್ಣಾಂಶ ಶೇ 39ರಷ್ಟು ತಲುಪಿತ್ತು. ಕಾಫಿ ಬೆಳೆಗಾರರು ಫಸಲು ಉಳಿಸಿಕೊಳ್ಳಲು ಹಣ ಖರ್ಚು 3–4 ಬಾರಿ ಮಾಡಿ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿದ್ದರು. ಇದರಿಂದಾಗಿ ಬಹುತೇಕ ತೋಟಗಳಲ್ಲಿ ಈ ವರ್ಷ ಬಂಪರ್ ಫಸಲು ಇತ್ತು.
25 ದಿನಗಳಲ್ಲಿ ತಾಲ್ಲೂಕಿನಲ್ಲಿ ಸರಾಸರಿ 125 ಸೆಂ.ಮೀ. ದಾಖಲೆಯ ಮಳೆಯಾಗಿದ್ದು, ಕಾಫಿ ಬೆಳೆಗಾರರೇ ಹೇಳುವಂತೆ ಶೇ 60ಕ್ಕಿಂತ ಹೆಚ್ಚು ಪ್ರಮಾಣದ ಫಸಲು ಕೊಳೆ ರೋಗಕ್ಕೆ ತುತ್ತಾಗಿದೆ. ಗಿಡದಿಂದ ಉದುರಿ ಹಾಳಾಗಿದೆ.
‘ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಇರುವ ದೇವಾಲದಕೆರೆ, ಹೊಂಗಡಹಳ್ಳ, ಹೆಗ್ಗದ್ದೆ, ವಣಗೂರು, ಹಾನುಬಾಳು, ಕಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಫಿ, ಕಾಳುಮೆಣಸು ಎಲೆಗಳು ಸಹ ಉದುರಿ ಗಿಡಗಳು ಬರಲು ಕಡ್ಡಿಗಳಂತಾಗಿವೆ. ಮಲೆನಾಡಿನ ನಮ್ಮ ಭಾಗದಲ್ಲಿ ಒಂದು ವರ್ಷ ಅತಿವೃಷ್ಟಿ ಮತ್ತೊಂದು ವರ್ಷ ಅನಾವೃಷ್ಟಿ. ಜೊತೆಗೆ ಕಾಫಿ, ಕಾಳುಮೆಣಸು, ಏಲಕ್ಕಿ ಬೆಳೆಗಳಿಗೆ ಕಾಂಡ ಕೊರಕ, ಕೊಳೆ ರೋಗ, ಕೊಕ್ಕೆಕಂದು ರೋಗ ಬಾಧೆ ಕಾಡುತ್ತಿದೆ. ಇದರಿಂದ ಕಾಫಿ ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ’ ಎಂದು ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಡಿ. ಪ್ರಸನ್ನಕುಮಾರ್ ಹೇಳಿದರು.
‘2024ರಲ್ಲಿ ಕಾಫಿಗೆ ಉತ್ತಮ ಬೆಲೆ ಬಂದಿದೆ ಎಂಬುದು ಒಂದು ರೀತಿ ಸಮಾಧಾನ. ಆದರೂ, ಹಿಂದಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ಬೆಳೆಗಾರರು ನಿರಂತರವಾಗಿ ನಷ್ಟವನ್ನೇ ಅನುಭವಿಸಿಕೊಂಡು ಬಂದಿದ್ದೇವೆ. ಒಂದು ವರ್ಷ ಕಾಫಿ, ಕಾಳುಮೆಣಸು ಬೆಳೆಗೆ ಬೆಲೆ ಏರಿಕೆಯಾದರೆ, ಕಾರ್ಮಿಕರ ಕೂಲಿ ಸೇರಿದಂತೆ ಉತ್ಪಾದನಾ ವೆಚ್ಚ ಒಮ್ಮೆಲೆ ಏರಿಕೆ ಆಗುತ್ತದೆ. ಬೆಲೆ ಕಡಿಮೆಯಾದರೆ, ಉತ್ಪಾದನಾ ವೆಚ್ಚ ಮಾತ್ರ ಕಡಿಮೆ ಆಗುವುದಿಲ್ಲ’ ಎನ್ನುವುದು ಅವರ ಮಾತು.
‘ಒಳ್ಳೆಯ ಬಟ್ಟೆ ಹಾಕಿಕೊಂಡು, ವಾಹನಗಳಲ್ಲಿ ಓಡಾಡುವ ನಮ್ಮನ್ನು ನೋಡಿ, ನೀವೇನು ಕಾಫಿ ಬೆಳೆಗಾರರು ಬಿಡಿ ಶ್ರೀಮಂತರು ಎನ್ನುತ್ತಾರೆ ಜನ. ತೋಟ ನಿರ್ವಹಣೆ ಮಾಡುತ್ತಿರುವ ನಾವು ಬ್ಯಾಂಕ್ ಸಾಲ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿ, ಕಾರ್ಮಿಕ ಸಮಸ್ಯೆ ಇಂತಹ ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳುತ್ತಾರೆ.
ಕಾಫಿ ಗಿಡಗಳ ಬೇರು ಸಡಿಲ
‘ಮಳೆಯ ಜೊತೆಗೆ ಬಿರುಗಾಳಿ ಬೀಸುತ್ತಿರುವ ಪರಿಣಾಮ ಗಿಡಗಳು ಹೆಚ್ಚು ಅಲಗಾಡುತ್ತಿವೆ’ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಮಾಜಿ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ ಹೇಳಿದರು.
‘ಇದರಿಂದ ಬೇರುಗಳು ಸಡಿಲಗೊಳ್ಳುತ್ತವೆ. ನೀರು ಬೇರಿಗೆ ಇಳಿದು ಗಿಡಗಳಿಗೆ ಹೆಚ್ಚು ತೇವಾಂಶ ಉಂಟಾಗುತ್ತಿದೆ. ಭೂಮಿಯೇ ಕಾಣದಷ್ಟು ಸಮೃದ್ಧವಾಗಿದ್ದ ಎಲೆಗಳು ಉದುರುತ್ತಿದ್ದು, ಗಿಡಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಕಾಳು ಮೆಣಸು ಫಸಲು ಸಹ ಗೊಂಚಲು ಸಮೇತ ಬಳ್ಳಿಯಿಂದ ಉದುರಿ ಮಣ್ಣು ಪಾಲಾಗುತ್ತಿದೆ’ ಎಂದರು.
ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಕಾಫಿ, ಕಾಳುಮೆಣಸು ಕರಗಿ ಕಪ್ಪಾಗಿವೆ. ಗಿಡದಿಂದ ಬೀಜಗಳು ಉದುರಿಹೋಗಿವೆ. ಗಿಡ, ಬಳ್ಳಿಯಿಂದ ಎಲೆಗಳು ಸಹ ಉದುರಿ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ.ಪರಮೇಶ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.