ADVERTISEMENT

ಆಲೂರು | ಮಳೆ ಇಲ್ಲ: ಒಣಗುತ್ತಿದೆ ಕಾಫಿ

​ಪ್ರಜಾವಾಣಿ ವಾರ್ತೆ
Published 6 ಮೇ 2024, 5:58 IST
Last Updated 6 ಮೇ 2024, 5:58 IST
ಆಲೂರು ತಾಲ್ಲೂಕಿನಲ್ಲಿ ಮಳೆ ಇಲ್ಲದೇ ಕಾಫಿ ಗಿಡಗಳು ಒಣಗುತ್ತಿವೆ.
ಆಲೂರು ತಾಲ್ಲೂಕಿನಲ್ಲಿ ಮಳೆ ಇಲ್ಲದೇ ಕಾಫಿ ಗಿಡಗಳು ಒಣಗುತ್ತಿವೆ.   

ಆಲೂರು: ಪ್ರತಿ ವರ್ಷ ಈ ವೇಳೆಗೆ 10-15 ಇಂಚು ಮಳೆಯಾಗುತ್ತಿತ್ತು. ಈ ವರ್ಷ ಕೇವಲ ಅರ್ಧ, ಮುಕ್ಕಾಲು ಇಂಚು ಮಳೆಯಾಗಿದ್ದು, ತಾಲ್ಲೂಕಿನ ಕಸಬಾ, ಕೆ. ಹೊಸಕೋಟೆ, ಪಾಳ್ಯ, ಕುಂದೂರು ಹೋಬಳಿಗಳಲ್ಲಿರುವ ಕಾಫಿ, ಅಡಿಕೆ ಗಿಡಗಳು ಒಣಗುತ್ತಿವೆ.

ನವೆಂಬರ್‌ನಲ್ಲಿ ಹದ ಮಳೆಯಾಗಿತ್ತು. ಅದನ್ನು ಹೊರತುಪಡಿಸಿದರೆ ಏಪ್ರಿಲ್ ಮಧ್ಯೆ ಕೆಲವೆಡೆ ಒಂದು ಇಂಚು ಮಳೆಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಮಳೆಯಾಗದೇ ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿದೆ. ಕಸಬಾ ಹೋಬಳಿ ಹೊರತು ಪಡಿಸಿದರೆ ಉಳಿದ ಮೂರು ಹೋಬಳಿಗಳು ಬಹುತೇಕ ಸಾಮಾನ್ಯವಾಗಿ ಅಲ್ಪ ಮಲೆನಾಡು ಹವಾಮಾನ ಹೊಂದಿವೆ.

ಪ್ರತಿ ವರ್ಷ ಯಥಾಸ್ಥಿತಿ ಮಳೆಯಾಗುತ್ತದೆಂದು ನಂಬಿದ್ದ ಬಹುತೇಕ ರೈತರು, ಗದ್ದೆಗಳಲ್ಲಿ ಬಹುವಾರ್ಷಿಕ ಅಡಿಕೆ ಬೆಳೆಗೆ ಮಾರು ಹೋದರು. ಕೆಲ ರೈತರು ಕೊಳವೆಬಾವಿ ನೀರು ನಂಬಿಕೊಂಡು ಎತ್ತರದ ಹೊಲದ ಪ್ರದೇಶದಲ್ಲೂ ಅಡಿಕೆ ಗಿಡ ನಾಟಿ ಮಾಡಿದರು.

ADVERTISEMENT

ಆದರೆ ಐದು ತಿಂಗಳಿನಿಂದ ಮಳೆಯಾಗದೇ ಕೆರೆ, ಕಟ್ಟೆಗಳಲ್ಲಿ ನೀರಿಲ್ಲ. ಕೊಳವೆ ಬಾವಿಗಳು ಇಂಗುತ್ತಿರುವುದರಿಂದ ಕಾಫಿ, ಅಡಿಕೆ ಗಿಡಗಳು ಒಣಗಿ ಎಲೆ ಉದುರುತ್ತಿವೆ. ಕೊಳವೆಬಾವಿಯಲ್ಲಿ ನೀರಿದ್ದ ರೈತರು ಹಗಲು, ರಾತ್ರಿ ಎನ್ನದೇ ಆಗಾಗ ಬಿಡುವು ನೀಡಿ ನೀರನ್ನು ಸ್ಪ್ರಿಂಕ್ಲರ್ ಮೂಲಕ ಗಿಡಗಳಿಗೆ ಸಿಂಪಡಿಸುತ್ತಿದ್ದಾರೆ. ಹೆಚ್ಚೆಂದರೆ ಒಂದು ವಾರ ನೀರು ದೊರಕಬಹುದು. ಅಲ್ಲಿಯವರೆಗೆ ಮಳೆಯಾದರೆ ಗಿಡಗಳು ಉಳಿಯುತ್ತವೆ. ಇಲ್ಲದಿದ್ದರೆ ಸರ್ವನಾಶವಾಗುತ್ತದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ರೋಬಸ್ಟ ಗಿಡಗಳಿಗೆ ಹೆಚ್ಚು ನೆರಳು ಇರಬಾರದೆಂಬ ಉದ್ದೇಶದಿಂದ ಕಾಫಿ ಕೊಯ್ಲು ಮಾಡಿದ ನಂತರ, ಮರಗಸಿ ಮಾಡಿ ಬಯಲು ಮಾಡುತ್ತಾರೆ. ಬಿಸಿಲ ಧಗೆ ಅತಿಯಾಗಿ ನೆರಳು ಇಲ್ಲದಿರುವುದರಿಂದ ವಿಶೇಷವಾಗಿ ರೋಬಸ್ಟ ಕಾಫಿ ಗಿಡಗಳು ಸಂಪೂರ್ಣ ಒಣಗುತ್ತಿವೆ.  ಇದುವರೆಗೂ ಅರೆಬಿಕಾ ಕಾಫಿಗಿಂತ ರೋಬಸ್ಟ ಕಾಫಿಗೆ ಹೆಚ್ಚು ಬೆಲೆ ದೊರಕುತ್ತಿರಲಿಲ್ಲ. ಆದರೆ ಸದ್ಯ ಅರೆಬಿಕಾಗಿಂತ ರೋಬಸ್ಟ ಕಾಫಿಗೆ ಅತ್ಯುತ್ತಮ ಬೆಲೆ ಸಿಗುತ್ತಿದೆ. ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಲೆ ಇದೆ.

ಆದರೆ ಕಾಫಿ ದಾಸ್ತಾನು ಮಾಡಿರುವುದು ಬಹಳ ಕಡಿಮೆ. ಬಿಸಿಲ ಧಗೆಯಿಂದ ಗಿಡಗಳೂ ಸಹ ಉಳಿಯದಂತಾಗಿರುವುದರಿಂದ ರೈತರು ನೆಲ ಕಚ್ಚುವ ಸ್ಥಿತಿಗೆ ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.