ADVERTISEMENT

ಪಂಚಕಲ್ಯಾಣ ಮಹೋತ್ಸವ ಆರಂಭ

ಜೈನರ ಗುತ್ತಿಯಲ್ಲಿ ವೀರಸಾಗರ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:48 IST
Last Updated 8 ಫೆಬ್ರುವರಿ 2021, 3:48 IST
ಹಳೇಬೀಡು ಸಮೀಪದ ಅಡಗೂರು ಜೈನರಗುತ್ತಿಯಲ್ಲಿ ಭಾನುವಾರ ವೀರಸಾಗರ ಮುನಿಮಹಾರಾಜರ ಸಮ್ಮುಖದಲ್ಲಿ ಪಂಚಕುಮಾರರ ಪೂಜೆ ನೆರವೇರಿಸಿ ಪಂಚಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು
ಹಳೇಬೀಡು ಸಮೀಪದ ಅಡಗೂರು ಜೈನರಗುತ್ತಿಯಲ್ಲಿ ಭಾನುವಾರ ವೀರಸಾಗರ ಮುನಿಮಹಾರಾಜರ ಸಮ್ಮುಖದಲ್ಲಿ ಪಂಚಕುಮಾರರ ಪೂಜೆ ನೆರವೇರಿಸಿ ಪಂಚಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು   

ಹಳೇಬೀಡು: ಅಡಗೂರು ಜೈನರಗುತ್ತಿ ಯಲ್ಲಿ ಮೂರು ದಿನ ನಡೆಯುವ 24 ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವಕ್ಕೆ ಭಾನುವಾರ ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

ಶಿವಪುರ ಕಾವಲಿನ ಬೆಟ್ಟಗುಡ್ಡಗಳ ನಡುವೆ ನಿಸರ್ಗ ತಾಣದಲ್ಲಿರುವ ಜೈನರಗುತ್ತಿಯಲ್ಲಿ ನಸುಕಿನಿಂದಲೇ ಧಾರ್ಮಿಕ ವಿಧಾನ ಆರಂಭವಾಯಿತು. ಬೆಟ್ಟದ ತಪ್ಪಲಿನಲ್ಲಿ ಮುಗಿಲು ಮುಟ್ಟುವಂತೆ ಮಂತ್ರಘೋಷ ಮೊಳಗಿತ್ತು. ಜೈನಾಗಮ ಸಂಪ್ರದಾಯದ ವಿಧಿವಿಧಾನದಂತೆ ಮುನಿಶ್ರೀ ವೀರಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಪೂಜಾದಿಗಳು ನಡೆದವು.

ಪಂಚಕಲ್ಯಾಣ ಮಹೋತ್ಸವಕ್ಕೆ ಅಡ್ಡಿ ಆತಂಕ ಎದುರಾಗದೆ ಶಾಂತಿಯುತವಾಗಿ ನೆರವೇರಲೆಂದು ಕ್ಷೇತ್ರ, ವಾಸ್ತು, ವಾಯು, ಮೇಘ, ಅಗ್ನಿ ಸಹಿತ ಪಂಚಕುಮಾರರಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ನಂತರ ಸರ್ವಾಣ ಯಕ್ಷ ಪೂಜೆ ನೆರವೇರಿಸಲಾಯಿತು. ನೂತನ ಮಾನಸ್ತಂಭ ಶಿಲಾನ್ಯಾಸ ನೆರವೇರಿದ ನಂತರ ಯಾಗ ಮಂಡಲ ಆರಾಧನೆ ನೆರವೇರಿತು. ಮಹಿಳೆಯರು ಜಿನ ಭಜನೆ ಮಾಡುತ್ತ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರತಿಷ್ಠಾಚಾರ್ಯ ಅಶೋಕ್ ಶಾಸ್ತ್ರಿ. ವಿಧಾನಾಚಾರ್ಯ ಪವನ ಪಂಡಿತ್, ಪ್ರವೀಣ್ ಪಂಡಿತ್, ಪುರೋಹಿತರಾದ ಬಾಲರಾಜ್, ನಾಗರಾಜು, ಜಿನೇಂದ್ರ ಪೂಜಾ ವಿಧಾನ ನಡೆಸಿದರು.

ಜೈನರಗುತ್ತಿ ಪದಾಧಿಕಾರಿಗಳಾದ ವಿಜಯ್‌ಕುಮಾರ್ ದಿನಕರ್, ಎ.ಆರ್.ಸುನೀಲ್ ಕುಮಾರ್, ಮುಖಂಡರಾದ ಎ.ಬಿ.ಕಾಂತರಾಜು, ಮನ್ಮಥ ರಾಜು, ಪುಷ್ಪರತ್ನರಾಜು, ಶೈಲಾ, ಧವನ್ ಜೈನ್, ನಿಶ್ಚಲ ಸನತ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.