ಅರಸೀಕೆರೆ: ನಗರದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಳನೀರು ಮಾರಾಟ, ಟೈರ್ ದುರಸ್ತಿ ಸ್ಥಳಗಳಿಗೆ ಭೇಟಿ ನೀಡಿದ ಪೌರಾಯುಕ್ತ ಕೃಷ್ಣಮೂರ್ತಿ ಮತ್ತು ಅಧಿಕಾರಿಗಳ ತಂಡ ಸೊಳ್ಳೆ , ಲಾರ್ವ ವೃದ್ಧಿಯಾಗದಂತೆ ಸ್ವಚ್ಚತೆ ಬಗ್ಗೆ ಮಹಿತಿ ನೀಡಿದರು.
ಕೃಷ್ಣಮೂರ್ತಿ ಮಾತನಾಡಿ, ಹೋಟೆಲ್ , ಮನೆಗಳು, ಬೀದಿ ಬದಿ ಅಂಗಡಿ, ವ್ಯಾಪಾರ ಜಾಗದ ನೀರು ಸಂಗ್ರಹ ಆಗುವ ಸ್ಥಳಗಳಲ್ಲಿ ಸೊಳ್ಳೆಗಳ ಮರಿ (ಲಾರ್ವ) ಉತ್ಪತ್ತಿಯಾಗುತ್ತಿವೆ. ಪ್ರತಿ ದಿನ ನೀರಿನ ಸ್ವಚ್ಛತೆ ಬಗ್ಗೆ ಗಮನ ಹರಿಸಿ, ನೀರು ಸಂಗ್ರಹಿಸುವ ಪಾತ್ರೆಗೆ ಮುಚ್ಚಳ ಹಾಕಬೇಕು. ನೀರು ಸಂಗ್ರಹ ಹಳೆಯದಾದಷ್ಟು ಲಾರ್ವ ಹುಳುಗಳು ಉತ್ಪತ್ತಿಯಾಗುತ್ತವೆ ಎಂದರು.. ಎಳ ನೀರಿನ ಬುರುಡೆಗಳನ್ನು ನಾಲ್ಕು ಭಾಗಗಳಾಗಿ ಮಾಡಲು ಮತ್ತು ಪಂಕ್ಚರ್ ಅಂಗಡಿಗಳಲ್ಲಿ ಹಳೆ ಟೈರ್‌ಗಳಲ್ಲಿ ನೀರು ಕಟ್ಟಿ ನಿಲ್ಲದಂತೆ ತೆಗೆದಿರಿಸಲು ಸೂಚಿಸಿದರು. ಜನರ ಸಹಕಾರದಿಂದ ಡೆಂಗಿ ಪ್ರಕರಣಗಳನ್ನು ಹತೋಟಿಗೆ ತರಬಹುದು ಎಂದರು.
ನಗರದ ಕಸ ಸಂಗ್ರಹ ವಾಹನಗಳಿಗೆ ನಾಗರಿಕರು ಒಣ ಮತ್ತು ಹಸಿ ಕಸಗಳನ್ನು ವಿಂಗಡಿಸಿ ನೀಡಬೇಕು. ಇದರಿಂದ ತ್ಯಾಜ್ಯ ಸಂಸ್ಕರಣೆ ಸುಲಭವಾಗುತ್ತದೆ. ಜ್ವರ ಮತ್ತು ಇನ್ನಿತರೇ ಕಾಯಿಲೆಗೆ ಜನರು ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆ ಪಡೆದರೆ ಜೀವ ಹಾನಿಗಳನ್ನು ತಪ್ಪಿಸಬಹುದು ಎಂದರು.
ಸರ್ಕಾರಿ ಆಸ್ಪತ್ರೆ ಆವರಣ, ರೈಲ್ವೆ ನಿಲ್ದಾಣ, ಗೂಡ್ಸ್ ಶೆಡ್ ರಸ್ತೆ, ಗುರುಡನಗಿರಿ ರಸ್ತೆ, ಎಪಿಎಂಸಿ , ಬಿ.ಎಚ್ ರಸ್ತೆ, ಹಾಸನ ರಸ್ತೆ, ತರಕಾರಿ ಮಾರುಕಟ್ಟೆ, ಮಟನ್ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಡೆಂಗಿ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.
ಆರೋಗ್ಯ ನಿರೀಕ್ಷಕರಾದ ಲಿಂಗರಾಜು, ರೇವಣ್ಣ ಸಿದ್ದಪ್ಪ, ಮಹಮದ್ ಗೌಸ್, ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.