ಹಾಸನ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಸೋಮವಾರ ನಡೆದ ರ‍್ಯಾಲಿಯಲ್ಲಿ, ಅವರ ತಾಯಿ ಅನುಪಮಾ ಅವರು ಸೆರಗೊಡ್ಡಿ ಕಣ್ಣೀರಿನೊಂದಿಗೆ ತಮ್ಮ ಪುತ್ರನ ಪರ ಮತಯಾಚನೆ ಮಾಡಿದರು.
‘ಪಂಚಾಯಿತಿಯಿಂದ ಪ್ರಧಾನಿವರೆಗೂ ಅವರಿಗೆ ಅಧಿಕಾರ ನೀಡಿದ್ದೀರಿ. ನನಗೆ ಇರುವುದು ಒಬ್ಬನೇ ಮಗ. ಮೂರು ಚುನಾವಣೆಗಳಲ್ಲಿಯೂ ನಮ್ಮನ್ನು ಸೋಲಿಸಿದ್ದೀರಿ. ಮೂರು ಬಾರಿ ಅವರ ಮುಂದೆ ಮಂಡಿಯೂರಿದ್ದೇವೆ. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿ ಕೊಡಿ’ ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು, ಶ್ರೇಯಸ್ ಪಟೇಲ್ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಸಿ.ಸತ್ಯಭಾಮಾ ಅವರಿಗೆ ನಾಮಪತ್ರ ಸಲ್ಲಿಸಿದರು.
ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬರುವುದು ತಡವಾಗಿದ್ದರಿಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಂ ಅವರೊಂದಿಗೆ ನಾಮಪತ್ರ ಸಲ್ಲಿಸಿದರು.
ನಂತರ ನಗರದ ಡೈರಿ ವೃತ್ತದಿಂದ ಕಾಂಗ್ರೆಸ್ ಕಚೇರಿವರೆಗೆ ನಡೆದ ರ‍್ಯಾಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡು ಮತಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.