ADVERTISEMENT

ರೈತರಿಗೆ ಪರಿಹಾರ ನೀಡಲು ಸರ್ಕಾರ ಮೀನಮೇಷ: ಶಾಸಕ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 14:15 IST
Last Updated 30 ಸೆಪ್ಟೆಂಬರ್ 2024, 14:15 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಹಾಸನ: ‘ಮಳೆಯಿಂದ ಹಾನಿ ಅನುಭವಿಸಿರುವ ಜಿಲ್ಲೆಯ ಸಾವಿರಾರು ರೈತರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರ ಸತಾಯಿಸುತ್ತಿದೆ’ ಎಂದು ಶಾಸಕ ಎಚ್.ಡಿ. ರೇವಣ್ಣ ಖಂಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಸ್ತೆ, ಸೇತುವೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ, ಕೆರೆಗಳು ಸೇರಿದಂತೆ ಆಸ್ತಿಪಾಸ್ತಿ ನಷ್ಟಕ್ಕೂ ನಯಾಪೈಸೆ ಬಿಡುಗಡೆ ಮಾಡಿಲ್ಲ’ ಎಂದು ಆಕ್ರೋಶ ಹೊರ ಹಾಕಿದರು.

‘ರೈತರ ಬಗ್ಗೆ ಅಸಡ್ಡೆ ತೋರುತ್ತಿದೆ. ಐದು ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ರೈತರಿಗೆ ಪರಿಹಾರ ಕೊಡಲು ಆಗದೇ ಇದ್ದರೆ, ಅದನ್ನಾದರೂ ಹೇಳಿ ಬಿಡಲಿ’ ಎಂದರು.

ADVERTISEMENT

‘ರೈತರ ದೃಷ್ಟಿಯಲ್ಲಿ ಅಂದಾಜಿಸುವುದಾದರೆ ₹3 ಸಾವಿರ ಕೋಟಿಯಿಂದ ₹4 ಸಾವಿರ ಕೋಟಿ ನಷ್ಟವಾಗಿದೆ. ಆದರೆ, ಈ ಸರ್ಕಾರ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವಾದರೂ ಪರಿಹಾರ ಕೊಡಲು ಹಿಂದೇಟು ಹಾಕುತ್ತಿದೆ. ರಸ್ತೆ ಗುಂಡಿ ಮುಚ್ಚಲೂ ಹಣ ನೀಡುತ್ತಿಲ್ಲ. ಗ್ರಾಮೀಣಾಭಿವೃದ್ಧಿಗೆ ಒಂದು ರೂಪಾಯಿಯನ್ನೂ ನೀಡಿಲ್ಲ’ ಎಂದು ದೂರಿದರು.

‘ಅಭಿವೃದ್ಧಿ ಮಾಡುತ್ತಿದ್ದೇವೆ, ರೈತರ ಹಿತ ಕಾಯುತ್ತಿದ್ದೇವೆ ಎಂದೆಲ್ಲ ಹೇಳುವ ಸರ್ಕಾರ, ಪರಿಹಾರ ಕೊಡದೇ ಇರುವುದಕ್ಕೆ ಏನು ರೋಗ? ಕೇವಲ ಕೇಂದ್ರದತ್ತ ಬೊಟ್ಟು ಮಾಡಿ ಕೂರುವುದು ಸರಿಯೇ? ಈಗಾಗಲೇ ಎರಡು ಬಾರಿ ಹೇಳಿದ್ದೇವೆ. ಇನ್ನೂ ಕೆಲ ದಿನ ಕಾಯುತ್ತೇವೆ. ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ’ ಎಂದರು.

‘ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. ಹಾಸ್ಟೆಲ್ ಅಡುಗೆಯವರು, ಅಟೆಂಡರ್‌ಗಳನ್ನು ವರ್ಗ ಮಾಡಲು ₹5 ಸಾವಿರದಿಂದ ₹10 ಸಾವಿರಕ್ಕೆ ಮಧ್ಯವರ್ತಿಗಳನ್ನು ಬಿಟ್ಟು ಕೈಚಾಚಲಾಗುತ್ತಿದೆ. ಸಾಕ್ಷ್ಯ ಬೇಕಿದ್ದರೆ ದಾಖಲೆ ಬಿಡುಗಡೆ ಮಾಡುವೆ. ಹಣ ಕೊಡದೇ ಹೋದರೆ ಹೆದರಿಸಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು, ಸರ್ಕಾರ ಅವಕಾಶ ಕೊಡಬಾರದು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣಗೌಡ, ಜೆಡಿಎಸ್ ವಕ್ತಾರ ಹೊಂಗೆರೆ ರಘು ಇದ್ದರು.

‘ಗೌಡರ ಕುಟುಂಬ ಮುಗಿಸಲು ಸಾಧ್ಯವಿಲ್ಲ’
‘ಕಾಂಗ್ರೆಸ್‌ನ ಕೆಲ ಸಚಿವರು ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದು ಪೊಲೀಸರನ್ನು ಬಿಟ್ಟು ಅಥವಾ ಬೇರಾವುದೋ ಒತ್ತಡದಿಂದ ಗೌಡರ ಕುಟುಂಬ ಮುಗಿಸುತ್ತೇವೆ ಎಂದು ಹೊರಟವರಿಗೆ ನಿರಾಸೆ ಆಗಲಿದೆ. ಕಾಲ ಒಂದೇ ರೀತಿ ಇರಲ್ಲ’ ಎಂದು ಎಚ್‌.ಡಿ. ರೇವಣ್ಣ ಎಚ್ಚರಿಸಿದರು. ‘ಇವರು ಏನೇ ಸಂಚು ಮಾಡಿದರೂ ನಮ್ಮ ಕುಟುಂಬ ಹೆದರಲ್ಲ. ದೇವೇಗೌಡರು ಯಾರಿಗೂ ಕಣ್ಣೀರು ಹಾಕಿಸಲು ಹೋಗಿಲ್ಲ. ಅವರೇ ಅಗತ್ಯವಿದ್ದಾಗ ಗೌಡರ ಬಳಿ ಬಂದು ಕಣ್ಣೀರು ಹಾಕಿದ್ದಾರೆ. ಕೈ ಕಾಲು ಹಿಡಿದಿದ್ದಾರೆ’ ಎಂದು ಕಾಂಗ್ರೆಸ್‌ ಸಚಿವರಿಗೆ ತಿರುಗೇಟು ನೀಡಿದರು. ‘ನಮ್ಮ ಕುಟುಂಬದ ಕೆಲವರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ಕೋರ್ಟ್ ದೇವರನ್ನು ನಂಬುತ್ತೇವೆ. ಆ ಬಗ್ಗೆ ಈಗ ಮಾತನಾಡಲ್ಲ. ಸಮಯ ಬಂದಾಗ ಎಲ್ಲ ಹೇಳುವೆ’ ಎಂದು ಪ್ರತಿಕ್ರಿಯಿಸಿದರು.
ಎಚ್‌.ಡಿ. ರೇವಣ್ಣ ನೀಡಿದ ಹಾನಿ ವಿವರ
ತೋಟಗಾರಿಕೆ;444 ಹೆಕ್ಟೇರ್ ಕೃಷಿ;861 ಹೆಕ್ಟೇರ್ ಕೆರೆ;99 ರಸ್ತೆ;646 ಕಿ.ಮೀ. ಸೇತುವೆ;38 ಶಾಲೆ;650 ಅಂಗನವಾಡಿ;369 ವಿದ್ಯುತ್ ಕಂಬ;1227

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.