ADVERTISEMENT

ಕಮಲದ ಹೂ ಪ್ರದರ್ಶಿಸಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 13:18 IST
Last Updated 26 ಜನವರಿ 2024, 13:18 IST
ಕೆ.ಎಂ. ಶಿವಲಿಂಗೇಗೌಡ
ಕೆ.ಎಂ. ಶಿವಲಿಂಗೇಗೌಡ   

ಹಾಸನ: ಅರಸೀಕೆರೆಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಶಾಲಾ ಮಕ್ಕಳು ಕಮಲದ ಹೂವನ್ನು ಪ್ರದರ್ಶಿಸಿದ್ದಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಕಮಲ ರಾಷ್ಟ್ರೀಯ ಹೂವು ಎಂದರೂ ಕೇಳಿಸಿಕೊಳ್ಳದ ಶಿವಲಿಂಗೇಗೌಡರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಎಲ್ಲ ರಾಷ್ಟ್ರೀಯ ಚಿಹ್ನೆಗಳನ್ನು ಬಳಸಿಕೊಂಡು ನೃತ್ಯ ಮಾಡುತ್ತಿದ್ದರು. ಅದರಲ್ಲಿ ಕಮಲದ ಹೂವು ಇರುವುದನ್ನು ಶಾಸಕ ಶಿವಲಿಂಗೇಗೌಡ, ಕಮಲ ರಾಷ್ಟ್ರೀಯ ಹೂ ಎನ್ನುವುದನ್ನೂ ಮರೆತು, ‘ಅದು ಬಿಜೆಪಿ ಪಕ್ಷದ ಚಿಹ್ನೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

'ಏಕೆ ಕಮಲದ ಹೂ ಹಾಕಿದ್ದೀರಿ? ತೆಗೆಯಿರಿ’ ಎಂದು ಶಿಕ್ಷಕಿ ವಿರುದ್ಧ ಶಾಸಕ ಶಿವಲಿಂಗೇಗೌಡ ಸಿಟ್ಟಿಗೆದ್ದರು. ‘ಅದು ರಾಷ್ಟ್ರೀಯ ಹೂ ಸರ್. ಅದಕ್ಕೆ ಹಾಕಿದ್ದೇವೆ. ಅದರ ಜೊತೆಗೆ ಎಲ್ಲ ರಾಷ್ಟ್ರೀಯ ಚಿಹ್ನೆಗಳಿವೆ’ ಎಂದು ಶಿಕ್ಷಕಿ ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಮತ್ತಷ್ಟು ಕೆರಳಿದ ಶಾಸಕ ಶಿವಲಿಂಗೇಗೌಡ, 'ಏಯ್ ಏನ್ ಗೊತ್ತು ನಿಮಗೆ? ಇನ್ನೇನ ಉದ್ಧಾರ ಮಾಡ್ತೀರ ಮಕ್ಕಳನ್ನ’ ಎಂದು ಏಕವಚನದಲ್ಲಿ ನಿಂದಿಸಿದರು.

ADVERTISEMENT

ಇದರಿಂದ ಶಿಕ್ಷಕಿ ಸಹ, 'ಈ ರೀತಿ ಮಾತಾಡೋದು ಸರಿ ಹೋಗಲ್ಲ ಸರ್’ ಎಂದು ಹೇಳಿದರು. ’ನನಗೆ ಎದುರು ಮಾತಾಡ್ತಿಯಾ ನಿನಗೆ ನೋಟಿಸ್ ನೀಡಬೇಕಾಗುತ್ತೆ’ ಎಂದು ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು. ಶಾಸಕ ಹಾಗೂ ಶಿಕ್ಷಕಿ ಮಧ್ಯೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ, ಸ್ಥಳೀಯ ಮುಖಂಡರ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.