ಹಾಸನ: ವಕ್ಫ್ ಬೋರ್ಡ್ ನೋಟಿಸ್ ಹಿಂಪಡೆಯಬೇಕು, ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬುದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕನ್ನಡ ಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದ ಸದಸ್ಯರು, ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಶಂಕರೇಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ವಾಕ್ಫ್ ಬೋರ್ಡ್ ಹೆಸರಿನಲ್ಲಿ ನೋಟಿಸ್ ನೀಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಸಾರ್ವಜನಿಕರ ಸೇವೆ ಮಾಡುತ್ತೇವೆ. ರೈತಪರ ಆಡಳಿತ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬರುತ್ತಾರೆ. ಇದೀಗ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ರಾಜ್ಯದ ಸಾವಿರಾರು ರೈತರ ಜಮೀನುಗಳ ಪಹಣಿಯಲ್ಲಿ ಅತಿಕ್ರಮವಾಗಿ ವಕ್ಫ್ ಆಸ್ತಿ ಎಂದು ನಮೂದಿಸಿ ನೋಟಿಸ್ ನೀಡಿದ್ದಾರೆ ಎಂದು ದೂರಿದರು.
ರೈತರ ಜಮೀನು, ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹೆಸರು ಬಂದಿದೆ. ಈಗ ದೇವಸ್ಥಾನ ಮಠಮಾನ್ಯಗಳ ಮೇಲೂ ಲಗ್ಗೆ ಇಟ್ಟಿರುವುದು ಸರಿಯಲ್ಲ. ಹಿಂದೂಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು, ಇದರಿಂದ ಸಾವಿರಾರು ವರ್ಷ ನೆಲೆಯೂರಿರುವ ರೈತರಿಗೆ ತೊಂದರೆ ಉಂಟಾಗಿದೆ. ಕೂಡಲೇ ಈ ಆದೇಶವನ್ನು ರದ್ದುಗೊಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ದಿನೇಶ್ ಗೌಡ, ಹರೀಶ್ ಗೌಡ, ಪಾಂಡು, ರಾಘವೇಂದ್ರ, ಜಾನ್, ಮಂಜೇಗೌಡ, ಅನಂತರಾಜು, ಕುಮಾರ್, ಪುಟ್ಟಸ್ವಾಮಿಗೌಡ, ವಿಜಯಕುಮಾರ್, ಜಯಶಂಕರ್, ರಾಮಸ್ವಾಮಿ, ಇತರರು ಭಾಗವಹಿಸಿದ್ದರು.
ನಿರ್ವಾಹಕ -ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ; ಪ್ರತಿಭಟನೆ ಹಾಸನ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದ್ದು ಇದನ್ನು ಖಂಡಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಿಟಿ ಬಸ್ ಹತ್ತಿದ್ದಾರೆ ಬಸ್‌ನ ಫುಟ್ ಬೋರ್ಡ್ ಮೇಲೆ ನಿಂತಿದ್ದ ವಿದ್ಯಾರ್ಥಿಗಳನ್ನು ಕೆಳಗಿಳಿಯುವಂತೆ ಕಂಡಕ್ಟರ್ ತಿಳಿಸಿದ್ದು ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ವಿದ್ಯಾರ್ಥಿಯ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ನೂರಾರು ವಿದ್ಯಾರ್ಥಿಗಳು ಕೆಲಕಾಲ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದರು. ಈ ವೇಳೆ ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿಪೋ ಮ್ಯಾನೇಜರ್ ಪ್ರಕಾಶ್ ಹೆಚ್ಚುವರಿ ಬಸ್ ನಿಯೋಜಿಸಿ ವಿದ್ಯಾರ್ಥಿಗಳನ್ನು ಕಳುಹಿಸಲು ಕ್ರಮ ಕೈಗೊಂಡರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಂಬೇಡ್ಕರ್ ಭವನಕ್ಕೆ ಜಾಗ ನೀಡಿ
ಹಾಸನ: ಕೆ.ಗೋಪನಹಳ್ಳಿ ಅಲೆಮಾರಿ ಹಂದಿ ಜೋಗಿ ಕಾಲೊನಿಗೆ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿ ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಬಾಗಿವಾಳು ಮಾತನಾಡಿ ‘ಹೊಳೆನರಸೀಪುರ ತಾಲ್ಲೂಕಿನ ಕೆ.ಗೋಪನಹಳ್ಳಿ ಗ್ರಾಮದಲ್ಲಿ ಅಲೆಮಾರಿ ಹಂದಿ ಜೋಗಿ ಜನಾಂಗದ ಸುಮಾರು 30 ಕುಟುಂಬಗಳಿದ್ದು ಸಾಂಸ್ಕೃತಿಕ ಕಾರ್ಯಕ್ರಮ ಹಬ್ಬ ಹರಿದಿನ ಮದುವೆ ಮುಂತಾದ ಕಾರ್ಯಕ್ರಮ ಮಾಡಲು ಜನರಿಗೆ ಜಾಗ ಅಥವಾ ಭವನ ಬೇಕಾಗಿದೆ’ ಎಂದರು. ಕೆರಗೋಡು ಗ್ರಾಮದಲ್ಲಿ 5 ಎಕರೆ 17 ಗುಂಟೆ ಸರ್ಕಾರಿ ಗೋಮಾಳ ಜಾಗವಿದ್ದು ಅಂಬೇಡ್ಕರ್ ಭವನ ಮತ್ತು ಉದ್ಯಾನ ನಿರ್ಮಾಣ ಮಾಡಲು ಇದರಲ್ಲಿ 1 ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಹರೀಶ್ ಹುಳವಾರೆ ಗೋವಿಂದರಾಜು ಎಂ.ವಿ. ರಂಗಸ್ವಾಮಿ ಎಸ್.ಎಸ್. ಚಂದ್ರಶೇಖರ್ ಸಾಣೇನಹಳ್ಳಿ ಕೇಶವಣ್ಣ ಮುಸಾವತ್ತೂರು ಗ್ರಾಮಸ್ಥರಾದ ಮಂಜುನಾಥ್ ಹರೀಶ ಗೋವಿಂದರಾಜು ಜಯಣ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.