ಹಾಸನ: ಮದುವೆ ಆಗಬೇಕಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೆಬಲ್ ಹರೀಶ್ ಬಿ.ವಿ. (32) ಎಂಬುವವರನ್ನು ತಾಲ್ಲೂಕಿನ ದುದ್ದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.
ಅರಸೀಕೆರೆ ತಾಲ್ಲೂಕಿನ ಬಾಗೇಶಪುರ ಗ್ರಾಮದ ವಿಜಯಕುಮಾರ್ ಎಂಬುವವರ ಪುತ್ರ ಹರೀಶ್ ಬಿ.ವಿ. ಬೆಂಗಳೂರಿನ ಕೆಎಸ್ಐಎಸ್‍ಎಫ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮದುವೆಗೂ ಮುನ್ನ ಹೊಸ ಮನೆ ಕಟ್ಟಿದ್ದ ಹರೀಶ್, ತಿಂಗಳ ಹಿಂದಷ್ಟೇ ಗೃಹಪ್ರವೇಶ ಮಾಡಿದ್ದರು.
ಹರೀಶ್ ಅವರಿಗೆ ನವೆಂಬರ್ 11 ರಂದು ಗಂಡಸಿ ಹೋಬಳಿಯ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ನಗರದ ಸಾಲಗಾಮೆ ರಸ್ತೆಯಲ್ಲಿರುವ ಆರ್.ಸಿ.ಕಲ್ಯಾಣ ಮಂಟಪದಲ್ಲಿ ಮದುವೆ ಆಯೋಜಿಸಲಾಗಿತ್ತು.
ಮದುವೆ ಹಿನ್ನೆಲೆಯಲ್ಲಿ ಕೆಲಕ್ಕೆ ರಜೆ ಹಾಕಿ ನ.3 ರಂದು ಗ್ರಾಮಕ್ಕೆ ಬಂದಿದ್ದ ಹರೀಶ್ ಬಿ.ವಿ., ಸ್ನೇಹಿತರು, ಸಂಬಂಧಿಗಳಿಗೆ ಸೋಮವಾರ ಬೈಕ್‌ನಲ್ಲಿ ಲಗ್ನ ಪತ್ರಿಕೆ ಹಂಚುತ್ತಿದ್ದರು. ರಾತ್ರಿ 9.30 ರಿಂದ 10.20 ನಡುವೆ ಮನೆಗೆ ವಾಪಸ್ ಆಗುತ್ತಿದ್ದಾಗ, ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‍ನ ರೈಲ್ವೆ ಬ್ರಿಡ್ಜ್ ಬಳಿ ಏಕಾಏಕಿ ದಾಳಿ ಮಾಡಿರುವ ದುಷ್ಕರ್ಮಿಗಳು, ಕಣ್ಣಿಗೆ ಖಾರದಪುಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.
ಹರೀಶ್ ಅವರನ್ನು ಕೊಲೆ ಮಾಡಿರುವ ವಿಷಯ ಹರೀಶ್ ಅವರ ಚಿಕ್ಕಪ್ಪನ ಮಗ ಮಂಜುನಾಥ್‍ಗೆ ರಾತ್ರಿ 10.30 ರ ಸುಮಾರಿಗೆ ಗೊತ್ತಾಗಿದೆ. ಕೂಡಲೇ ಗ್ರಾಮದ ಇತರರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ರೈಲ್ವೆ ಬ್ರಿಡ್ಜ್ ಸಮೀಪವಿರುವ ಕಾಯರ್ ಫ್ಯಾಕ್ಟರಿ ಮುಂಭಾಗ ರಸ್ತೆ ಮೇಲೆ ಹರೀಶ್ ಶವ ಬಿದ್ದಿತ್ತು.
ತಲೆಯ ಎಡಭಾಗ, ಹಿಂಭಾಗ ಹಾಗೂ ಮುಖಕ್ಕೆ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಶವದ ಪಕ್ಕದಲ್ಲಿಯೇ ಬೈಕ್ ಹಾಗೂ ಖಾರದ ಪುಡಿ ಇರುವ ಪ್ಲಾಸ್ಟಿಕ್ ಕವರ್ ಸಿಕ್ಕಿದೆ. ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಸಂಬಂಧದ ಅನುಮಾನ
ಹರೀಶ್ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಇರಬಹುದು ಎನ್ನುವ ಅನುಮಾನ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ. ಕೊಲೆಯಾಗಿರುವ ಹರೀಶ ಅವರ ಅಕ್ಕ ಪುಷ್ಪಾ ಎಂಬುವವರು ಹಾಸನದ ಬಿ.ಕಾಟೀಹಳ್ಳಿಯಲ್ಲಿ ವಾಸವಾಗಿದ್ದಾರೆ. ಪುಷ್ಪಾ ಅವರ ಮನೆಯ ಪಕ್ಕದಲ್ಲಿ ತಾಲ್ಲೂಕಿನ ಹಂಪನಹಳ್ಳಿ ಗ್ರಾಮದ ಹರೀಶ್ ಎಂಬುವರ ಪತ್ನಿ ಜೊತೆಗೆ ಕಾನ್‌ಸ್ಪೆಬಲ್ ಹರೀಶ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಕ್ರಮ ಸಂಬಂಧ ಕಾರಣಕ್ಕಾಗಿಯೇ ಪೇದೆ ಹರೀಶ್ ಮತ್ತು ಯೋಧ ಹರೀಶ್ ನಡುವೆ ಅನೇಕ ಸಲ ಜಗಳ ನಡೆದಿತ್ತು. ಇದೇ ವೈಮನಸ್ಸಿಗೆ ಕಾರಣವಾಗಿತ್ತು. ಇದೇ ವಿಚಾರವಾಗಿ ಹಂಪನಹಳ್ಳಿಯ ಹರೀಶ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕಾನ್‌ಸ್ಟೆಬಲ್ ಹರೀಶ್ ಅವರನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.