ADVERTISEMENT

ಹಾಸನ: ₹ 17 ಸಾವಿರ ದಾಟಿದ ಕೊಬ್ಬರಿ ಬೆಲೆ

ಖಾಸಗಿ ಮಾರುಕಟ್ಟೆಯಲ್ಲೂ ಏರುಗತಿಯಲ್ಲಿ ದರ: ಬೆಳೆಗಾರರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 7:16 IST
Last Updated 25 ಸೆಪ್ಟೆಂಬರ್ 2024, 7:16 IST
ಹಾಸನ ಜಿಲ್ಲೆಯ ಅರಸೀಕೆರೆ ಎಪಿಎಂಸಿಯಲ್ಲಿ ಸಂಗ್ರಹಿಸಿರುವ ಕೊಬ್ಬರಿ.
ಹಾಸನ ಜಿಲ್ಲೆಯ ಅರಸೀಕೆರೆ ಎಪಿಎಂಸಿಯಲ್ಲಿ ಸಂಗ್ರಹಿಸಿರುವ ಕೊಬ್ಬರಿ.   

ಅರಸೀಕೆರೆ (ಹಾಸನ): ಕೊಬ್ಬರಿ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ಕೆಲ ವಾರಗಳ ಹಿಂದೆ ₹10 ಸಾವಿರ ಆಸುಪಾಸಿನಲ್ಲಿದ್ದ ಕ್ವಿಂಟಲ್‌ ಕೊಬ್ಬರಿ ಬೆಲೆಯು 15 ದಿನದಲ್ಲಿ ₹ 17,008 ಕ್ಕೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ವೇಳೆಗೆ ₹20 ಸಾವಿರಕ್ಕೇರಬಹುದು ಎಂದು ಅಂದಾಜಿಸಲಾಗುತ್ತಿದೆ.

ತಾಲ್ಲೂಕಿನ ಕೊಬ್ಬರಿಯು ಮಹಾರಾಷ್ಟ್ರ, ಗುಜರಾತ್‌, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ರವಾನೆಯಾಗುತ್ತದೆ. ಇದೀಗ ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚು ಬೇಡಿಕೆ ಇರುವುದೇ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಸೆ.3 ರಂದು ಕ್ವಿಂಟಲ್‌ಗೆ ₹12,121 ಇದ್ದ ಬೆಲೆ ಸೆ.20 ರಂದು ₹15,601 ಕ್ಕೆ ಏರಿಕೆಯಾಗಿತ್ತು. 24 ರಂದು ಕ್ವಿಂಟಲ್‌ಗೆ ₹17,008 ದರ ಸಿಕ್ಕಿದೆ. ಉತ್ತಮ ಬೆಲೆಯಿಲ್ಲದೇ ಸೊರಗಿದ್ದ ಕೊಬ್ಬರಿಗೆ ಉತ್ತಮ ಬೆಲೆ ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ADVERTISEMENT

‘ಬೆಲೆ ಏರಿಕೆಯಾಗುತ್ತಿದ್ದಂತೆಯೇ ರೈತರು ಮಾರುಕಟ್ಟೆಗೆ ಕೊಬ್ಬರಿ ತರುತ್ತಿದ್ದಾರೆ. ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಹರಾಜಿಗೆ ಅನುಗುಣವಾಗಿ ರೈತರಿಗೆ ದರ ನೀಡಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಗೆ ನೇರವಾಗಿ ನಗದು ಅಥವಾ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿದೆ’ ಎಪಿಎಂಸಿ ಅಧಿಕಾರಿಗಳು ಹೇಳುತ್ತಾರೆ.

ದಶಕದ ಹಿಂದೆ ಒಂದು ಕ್ವಿಂಟಲ್ ಕೊಬ್ಬರಿ ಧಾರಣೆ ₹19,800ದಿಂದ ₹19,900ವರೆಗೆ ಏರಿಕೆಯಾಗಿ ದಾಖಲೆ ನಿರ್ಮಿಸಿತ್ತು. ನಂತರ ಕುಸಿತ ಕಂಡು, 2023ರ ಜುಲೈ ವೇಳೆಗೆ ₹7,700ರಿಂದ ₹7,800ರವರೆಗೆ ಇಳಿಕೆಯಾಗಿತ್ತು. ಆಗ ನಾಫೆಡ್‌ ಮೂಲಕ ಸರ್ಕಾರವೇ ಖರೀದಿಸಿದ್ದು, ಕೇಂದ್ರ ಸರ್ಕಾರದ ₹12 ಸಾವಿರ ಹಾಗೂ ರಾಜ್ಯ ಸರ್ಕಾರ ₹1,500 ಪ್ರೋತ್ಸಾಹ ಧನ ಸೇರಿದಂತೆ ₹13,500 ಧಾರಣೆ ದೊರಕಿತ್ತು. ಇದೀಗ ಖಾಸಗಿ ಮಾರುಕಟ್ಟೆಯಲ್ಲಿ ಇದಕ್ಕಿಂತಲೂ ಹೆಚ್ಚಿನ ದರ ದೊರೆತಂತಾಗಿದೆ.

‘ಉತ್ತಮ ಮಳೆಯಾದ 1 ರಿಂದ 2 ವರ್ಷದ ನಂತರ ಕೊಬ್ಬರಿ ಇಳುವರಿ ಹೆಚ್ಚಾಗುತ್ತದೆ. ತೆಂಗಿನ ಗಿಡದಲ್ಲಿ ಹೂ, ಹೊಂಬಾಳೆ, ಎಳನೀರು, ಕಾಯಿ ನಂತರ ಕೊಬ್ಬರಿಯಾಗಲು ಇಷ್ಟು ಸಮಯ ಬೇಕಾಗುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದರಿಂದ ಈ ವರ್ಷ ಇಳುವರಿ ಕಡಿಮೆಯಾಗಿದೆ’ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ಹಬ್ಬದ ಪ್ರಯುಕ್ತ ಹೊರಭಾಗಗಳಿಗೆ ಕೊಬ್ಬರಿ ಬೇಡಿಕೆ ಹೆಚ್ಚಾಗಿದೆ. ಮಳೆಯ ಅಭಾವ ರೋಗಗಳ ಬಾಧೆಯಿಂದ ಉತ್ಪಾದನೆ ಕಡಿಮೆಯಾಗಿದ್ದು ದರ ಏರಿಕೆಯಾಗಿದೆ.
–ಸಿದ್ದಲಿಂಗಸ್ವಾಮಿ ಅರಸೀಕೆರೆ ಎಪಿಎಂಸಿ ಕಾರ್ಯದರ್ಶಿ
ಜೀವನ ನಿರ್ವಹಣೆಗೆ ತೆಂಗನ್ನೇ ಅವಲಂಬಿಸಿದ್ದು ಈ ಬೆಲೆ ಏರಿಕೆ ರೈತರಿಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಬೆಲೆ ಇದ್ದರೆ ಒಳ್ಳೆಯದು.
–ಕುಂಬಾರು ಪಾಪಣ್ಣ ಅರಸೀಕೆರೆ ರೈತ
ಕೇರಳ ತಮಿಳುನಾಡಿನಲ್ಲಿ ಕೊಬ್ಬರಿ ಸೀಸನ್‌ ಮುಗಿದಿದ್ದು ಕರ್ನಾಟಕದ ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಏರಿಕೆ ಆಗಬಹುದು.
–ಎಂ.ಎನ್‌. ಜಗದೀಶ್‌ ಅರಸೀಕೆರೆ ಮಂಡಿ ವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.