ADVERTISEMENT

Channapatna Bypoll | ಸಿಂಪಥಿಗಾಗಿ ಸಿ.ಪಿ. ಯೋಗೇಶ್ವರ್‌ ನಾಟಕ: ಅಶೋಕ ಟೀಕೆ

3 ತಿಂಗಳ ಮೊದಲೇ ಕಾಂಗ್ರೆಸ್‌ಗೆ ಹೋಗುವ ಯೋಜನೆ: ಆರ್.ಅಶೋಕ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 13:59 IST
Last Updated 27 ಅಕ್ಟೋಬರ್ 2024, 13:59 IST
ಆರ್. ಅಶೋಕ 
ಆರ್. ಅಶೋಕ    

ಹಾಸನ: ಜೆಡಿಎಸ್–ಬಿಜೆಪಿಯವರು ಟಿಕೆಟ್‌ ನೀಡಲಿಲ್ಲ ಎಂಬ ಸಿಂಪಥಿ ಗಳಿಸಿಕೊಳ್ಳಲು ಸಿ.ಪಿ. ಯೋಗೇಶ್ವರ್ ನಾಟಕ ಆಡಿದ್ದು, ಮೂರು ತಿಂಗಳ ಹಿಂದೆಯೇ ಆಗಿದ್ದ ನಿರ್ಧಾರದಂತೆ ಈಗ ಕಾಂಗ್ರೆಸ್‌ ಸೇರಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ಶನಿವಾರ ರಾತ್ರಿ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಪ್ರತಿ ಚುನಾವಣೆಯಲ್ಲೂ ಪಕ್ಷಾಂತರ ಮಾಡುತ್ತಾರೆ. ಇದುವರೆಗೆ ಏಳು ಬಾರಿ ಪಕ್ಷ ಬದಲಿಸಿದ್ದಾರೆ. ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಹಿಂದೆ ಬಿಜೆಪಿ ಆಡಳಿತ ಇದ್ದುದರಿಂದ ಇಲ್ಲಿಗೆ ಬಂದಿದ್ದು, ಅದಕ್ಕೂ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ಅಲ್ಲಿಗೆ ಹೋಗಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಅದಕ್ಕಾಗಿಯೇ ಯೋಗೇಶ್ವರ್ ಅಲ್ಲಿಗೆ ಹೋಗಿದ್ದಾರೆ ಎಂದು ದೂರಿದರು.

ಪ್ರತಿ ಚುನಾವಣೆಗೂ ಒಂದು ಪಕ್ಷ, ಒಂದು ಚಿನ್ಹೆಯನ್ನು ಆಯ್ಕೆ ಮಾಡುತ್ತಾರೆ. ಆದರೆ, ಶಾಶ್ವತವಾಗಿ ಕೆಲಸ ಮಾಡುವವರನ್ನು ಜನರು ಆಯ್ಕೆ ಮಾಡುತ್ತಾರೆ ಎಂದರು.

ADVERTISEMENT

ಚನ್ನಪಟ್ಟಣದ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ₹150 ಕೋಟಿ ಕೊಟ್ಟಿದೆ. ಅದನ್ನು ನೆನಪಿಟ್ಟುಕೊಂಡು, ಬಿಜೆಪಿ, ನರೇಂದ್ರ ಮೋದಿ, ದೇವೇಗೌಡರ ಪರವಾಗಿ ಅಲ್ಲಿನ ಜನರು ನಿಖಿಲ್‌ ಅವರಿಗೆ ಮತ ಹಾಕಲಿದ್ದಾರೆ ಎಂದು ಹೇಳಿದರು.

ಯೋಗೇಶ್ವರ್‌ ಅವರಿಗೆ ಟಿಕೆಟ್‌ ಕೊಡಿಸಲು ನಾನೂ ಸೇರಿದಂತೆ ನಮ್ಮ ಪಕ್ಷದ ಎಲ್ಲ ನಾಯಕರು ಪ್ರಯತ್ನಿಸಿದ್ದಾರೆ. ಅವರೂ ದೆಹಲಿಗೆ ಹೋಗಿದ್ದರು. ಟಿಕೆಟ್ ಕೊಡುತ್ತೇವೆ ಎಂದರೂ ಬೇಡ ಎಂದು ಹೊರಟು ಬಂದರು. ಪ್ರಾರಂಭದಲ್ಲಿ ಟಿಕೆಟ್ ಕೇಳಿದಂಗೆ ನಾಟಕವಾಡಿ ಹೋಗಿದ್ದಾರೆ. ಮೂರು ತಿಂಗಳ ಹಿಂದೆಯೇ ಇದೆಲ್ಲ ಯೋಜನೆಯನ್ನು ಅವರು ರೂಪಿಸಿದ್ದರು ಎಂದು ಆರೋಪಿಸಿದರು.

ಮೂರು ತಿಂಗಳ ಹಿಂದೆ ಡಿ.ಕೆ. ಶಿವಕುಮಾರ್ ಜೊತೆಗೆ ಮಾತನಾಡಿದ್ದರು. ಅದಕ್ಕಾಗಿಯೇ ಡಿ.ಕೆ. ಸುರೇಶ್‌ ಅವರು ಪದೇ ಪದೇ ಅನಿರೀಕ್ಷಿತ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದರು. ಇದೇ ಆ ಅನಿರೀಕ್ಷಿತ ಅಭ್ಯರ್ಥಿ ಎಂಬುದು ಈಗ ಗೊತ್ತಾಗುತ್ತಿದೆ ಎಂದರು.

ಚನ್ನಪಟ್ಟಣದಲ್ಲಿ ಡಿ.ಕೆ. ಸುರೇಶ್‌ ನಿಲ್ಲಬೇಕಿತ್ತು. ಆದರೆ, ಮೊದಲೇ ಯೋಜನೆ ಮಾಡಿಕೊಂಡಿದ್ದರಿಂದ ಬಿಜೆಪಿ–ಜೆಡಿಎಸ್‌ನವರು ಟಿಕೆಟ್‌ ಕೊಡಲಿಲ್ಲ ಎಂಬ ಸಿಂಪಥಿ ಗಳಿಸಲು ಈ ನಾಟಕ ಆಡಿದರು. ಅವರಿಗೆ ಅಲ್ಲಿನ ಜನ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಈ ಭ್ರಷ್ಟ, ಲೂಟಿಕೋರ ಸರ್ಕಾರಕ್ಕೆ ಜನ ಪಾಠ ಕಲಿಸುತ್ತಾರೆ. ನಿಖಿಲ್‌ ಎರಡು ಬಾರಿ ಸೋತಿದ್ದಾರೆ. ಕುರುಕ್ಷೇತ್ರದಲ್ಲಿ ಅಭಿಮನ್ಯವಿನ ಪಾತ್ರ ತೆಗೆದುಹಾಕಿ, ಅರ್ಜುನನ ಪಾತ್ರ ಕೊಟ್ಟಿದ್ದೇವೆ. ಮೂರನೇ ಬಾರಿ ಚಕ್ರವ್ಯೂಹ ಭೇದಿಸುತ್ತಾರೆ. ಅರ್ಜುನನ ರೀತಿ ಹೋರಾಟ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಬಿಜೆಪಿಯ ಎಲ್ಲ ನಾಯಕರೂ ಪ್ರಚಾರಕ್ಕೆ ಹೋಗುತ್ತೇವೆ. ಬಿ.ಎಸ್‌. ಯಡಿಯೂರಪ್ಪ, ನಾನು, ಅಶ್ವತ್ಥ ನಾರಾಯಣ, ಸದಾನಂದಗೌಡ ಸೇರಿದಂತೆ ಒಕ್ಕಲಿಗ, ಲಿಂಗಾಯತ, ದಲಿತ, ಹಿಂದುಳಿದ ಸಮುದಾಯಗಳ ನಾಯಕರು ಪ್ರಚಾರ ಮಾಡುತ್ತೇವೆ. ನಮ್ಮ ಸ್ವಂತ ಚುನಾವಣೆಯನ್ನು ಎದುರಿಸಿದಂತೆಯೇ ಚನ್ನಪಟ್ಟಣದಲ್ಲೂ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.